ಎಲ್ಲವೂ ಗೋರಕ್ಷಣೆಗಾಗಿ,ಆದರೆ ತಥಾಕಥಿತ ಗೋರಕ್ಷಕರು ನಮ್ಮ ಪ್ರತಿನಿಧಿಗಳಲ್ಲ:ಗಡ್ಕರಿ

ಹೊಸದಿಲ್ಲಿ,ಮೇ 21: ಗೋರಕ್ಷಣೆ ಮತ್ತು ತಥಾಕಥಿತ ಗೋರಕ್ಷಕರ ನಡುವಿನ ಅಂತರವನ್ನು ರವಿವಾರ ಇಲ್ಲಿ ಪುನರುಚ್ಚರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಬಿಜಿಪಿ ಮತ್ತು ಆರೆಸ್ಸೆಸ್ ಗೋರಕ್ಷಣೆಯನ್ನು ಬೆಂಬಲಿಸುತ್ತವೆಯಾದರೂ ಗೋರಕ್ಷಣೆಯ ಹೆಸರಿನಲ್ಲಿ ಹೆಚ್ಚುತ್ತಿರುವ ಕಾನೂನುಭಂಗ ಘಟನೆಗಳಿಗೆ ಅವುಗಳನ್ನು ಹೊಣೆಯನ್ನಾಗಿಸ ಬಾರದು ಎಂದು ಹೇಳಿದರು.
‘‘ನಾವು ಗೋರಕ್ಷಣೆಯನ್ನು ಬೆಂಬಲಿಸುತ್ತೇವೆ. ಗೋಹತ್ಯೆ ನಡೆಯಕೂಡದು, ಅದು ನಮ್ಮ ಪಕ್ಷದ ನಂಬಿಕೆಯಾಗಿದೆ. ಆದರೆ ಗೋರಕ್ಷಣೆಯ ಹೆಸರಿನಲ್ಲಿ ಇಂದು ನಡೆಯುತ್ತಿರು ವುದನ್ನು ನಮ್ಮ ಸಚಿವರು, ನಮ್ಮ ಪಕ್ಷ, ನಮ್ಮ ಸರಕಾರ ಒಪ್ಪುವುದಿಲ್ಲ. ಯಾರೇ ಆದರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ ’’ ಎಂದ ಅವರು, ‘‘ ಕಾನೂನನ್ನು ಉಲ್ಲಂಘಿ ಸುವಾಗ ಸಿಕ್ಕಿಬೀಳುವ, ತಾವು ಬಿಜೆಪಿಯವರು ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಇದಕ್ಕೆ ಹೊಣೆಯಾಗಿದ್ದಾರೆ. ಅದು ಯಾರೇ ಆಗಿರಲಿ, ತಾವು ಬಿಜೆಪಿಗೆ ಸೇರಿದವರು ಎಂದು ಹೇಳಿಕೊಳ್ಳುವುದನ್ನು ಕೆಲವೊಮ್ಮೆ ಟಿವಿಗಳಲ್ಲಿ ನೋಡಿ ನನಗೇ ಅಚ್ಚರಿಯಾಗುತ್ತದೆ. ಅವರು ಬಿಜೆಪಿಯಲ್ಲಿ ಇದ್ದಿರುವುದಿಲ್ಲ, ನಮಗೆ ಅವರೊಂದಿಗೆ ಯಾವುದೇ ಸಂಬಂಧವೂ ಇದ್ದಿರುವುದಿಲ್ಲ. ಅವರು ನಮ್ಮ ವಿರುದ್ಧ ತಪ್ಪು ವಿಷಯಗಳನ್ನೇ ಹೇಳುತ್ತಾರೆ ’’ಎಂದರು.
‘‘ಎಡಪಂಥೀಯರು ಮತ್ತು ಹಿಂದುತ್ವ ವಿರೋಧಿ ಬ್ರಿಗೇಡ್ ಸರಕಾರದ ವಿರುದ್ಧ ನಡೆಸುತ್ತಿರುವ ದಾಳಿಗಳನ್ನು ಪ್ರಸ್ತಾಪಿಸಿದ ಗಡ್ಕರಿ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿ ರುವ ಘಟನೆಗಳಿಗೆ ಅವರು ನಮ್ಮನ್ನು ದೂರುತ್ತಿದ್ದಾರೆ. ಇದು ಅನ್ಯಾಯ ಎಂದು ನಾನು ಭಾವಿಸಿದ್ದೇನೆ ’’ಎಂದರು.
ಸಮಾಜದಲ್ಲಿರುವಂತೆ ರಾಜಕೀಯ ಪಕ್ಷಗಳಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಜನರಿದ್ದಾರೆ. ಪಕ್ಷದ ಕಾರ್ಯಕರ್ತರ ಸೋಗಿನಲ್ಲಿ ಹೊರಗಿನವರು ಹೇಳುವುದನ್ನು ಕೇಳುವುದಕ್ಕಿಂತ ಹಿರಿಯ ನಾಯಕರು ಏನು ಹೇಳುತ್ತಾರೆ ಎನ್ನುವುದರ ಮೇಲೆ ಗಮನ ಹರಿಸುವುದು ಒಳ್ಳೆಯದು ಎಂದು ಗಡ್ಕರಿ ಹೇಳಿದರು.







