ರಾಜ್ಯದಲ್ಲಿ ಉತ್ತಮ ಮಳೆ ಆಗಲೆಂದು ಹಾಸನಾಂಬೆ ದೇವಿಯಲ್ಲಿ ಪ್ರಾರ್ಥನೆ ಮಾಡಿರುವೆ: ಸಿಎಂ
ಮುಖ್ಯಮಂತ್ರಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ

ಹಾಸನ, ಮೇ 21: ಇಡೀ ರಾಜ್ಯದಲ್ಲಿ ಉತ್ತಮ ಮಳೆ ಆಗಿ ರೈತರ ಮೊಗದಲ್ಲಿ ನಗು ಬರಲೆಂದು ಹಾಸನಾಂಬೆ ದೇವಿಯಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಮಹಾರಾಜ ಉದ್ಯಾನವನದಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಹೇಮಾವತಿ ಜಲಾಶಯದಿಂದ ಹಾಸನ ನಗರಕ್ಕೆ ಕುಡಿಯುವ ನೀರು ಸರಬರಾಜು ಮತ್ತು ನಗರದ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ನೆರವೇರಿಸಿ ನಂತರ ಜ್ಯೊತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲೆ ಒಳ್ಳೆ ಮಳೆ ಬಂದು ರೈತರೆಲ್ಲಾ ಸಂತೋಷದಿಂದ ಇರುವಂತೆ ನೋಡಿಕೊಳ್ಳಲು ತಾಯಿ ಹಾಸನಾಂಬೆಯಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.
ಶಾಶ್ವತ 24X7 ಕುಡಿಯುವ ನೀರು ಕೊಡುವ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. 117 ಕೋಟಿ ರೂ. ಗಳ ವೆಚ್ಚದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗೆ ಕೇಂದ್ರದಿಂದ ಶೇಕಡ 50 ಭಾಗ, ರಾಜ್ಯದಿಂದ ಶೇಕಡ 20 ಭಾಗ ಹಣ ಹಾಗೂ ನಗರಸಭೆಯಿಂದ ಶೇಕಡ 30 ಭಾಗ ಹಣವನ್ನು ವಿನಿಯೋಗಿಸಲಾಗುತ್ತಿದೆ. ಆದರೇ ಹೆಸರು ಮಾತ್ರ ಕೇಂದ್ರ ಪುರಸ್ಕೃತವಾಗಿದೆ. ಈ ಯೋಜನೆಯನ್ನು ಎಲ್ಲಾ ಸೇರಿ ಮಾಡಲಾಗುತ್ತದೆ. ಹೇಮಾವತಿ ನೀರಿನ ಮೂಲಕ ನೀರು ತಂದು ಪೂರೈಸಲಾಗುವುದು. 2047ನೇ ಇಸವಿಯವರೆಗೂ 30 ವರ್ಷಗಳ ಕಾಲ ಕುಡಿಯುವ ನೀರನ್ನು ಒದಗಿಸುವ ಯೋಜನೆ ಎಂದರು.
ಪ್ರತಿ ಮನುಷ್ಯನಿಗೆ ದಿನದಲ್ಲಿ 135 ಲೀಟರ್ ನೀರಿನ ಅಗತ್ಯವಿದೆ. ಆದರೇ ಈಗ ಕೇವಲ 50 ಲಿಟರ್ ನೀರು ಮಾತ್ರ ಪೂರೈಕೆ ಮಾಡಲು ಸಾಧ್ಯವಾಗಿದೆ. ಅಮೃತ ಯೋಜನೆಯ ಕಾಮಗಾರಿ ಮುಗಿದ ಮೇಲೆ ಅವಶ್ಯಕ ಪೂರ್ಣ ನೀರನ್ನು ಒದಗಿಸಲು ಸಾಧ್ಯವಾಗುತ್ತದೆ. ಮುಂದಿನ 30 ವರ್ಷದವರೆಗೂ ನೀರಿನ ಯಾವ ಸಮಸ್ಯೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿದರು.
ಅನೇಕ ಖಾಯಿಲೆಗಳು ಕುಡಿಯುವ ನೀರಿನಿಂದಲೇ ಬರುತ್ತದೆ. ಎಲ್ಲಾ ಕಡೆ ಶುದ್ಧ ನೀರಿನ ಘಟಕ ನಿರ್ಮಿಸುವ ಗುರಿ ಹೊಂದಿದ್ದೇವೆ. ಇಡೀ ರಾಜ್ಯದಲ್ಲಿ 9 ಸಾವಿರಕ್ಕೂ ಹೆಚ್ಚು ಕುಡಿಯುವ ನೀರಿನ ಘಟಕದ ಕೆಲಸ ಆರಂಭವಾಗಿದೆ. ಹಳ್ಳಿ ಗಾಡಿನ ಜನರಿಗೂ ಶುದ್ಧ ನೀರು ನೀಡಿದರೆ ಅನೇಕ ರೋಗದಿಂದ ದೂರ ಮಾಡಬಹುದು ಎಂದರು.
ನಾಡಿನಲ್ಲಿ ಭೀಕರ ಬರಗಾಲ ಇದ್ದರೂ ಅದು ಜನತೆಗೆ ತಟ್ಟದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಮುಂಗಾರಿನಲ್ಲಿ 139 ತಾಲೂಕುಗಳನ್ನು ಬರಗಾಲದ ಪ್ರದೇಶ ಎಂದು ಘೋಷಣೆ ಮಾಡಲಾಗಿತ್ತು. 2015-16ನೆ ಸಾಲಿನಲ್ಲಿ ಹೆಚ್ಚಿನ ಬರಗಾಲ ಕಂಡು ಬಂದಿದೆ. ಪ್ರಕೃತಿಯು ಮುನಿಸಿ ಕೊಂಡರೇ ಬಹಳ ಕಷ್ಟ. ಮೇವು ತೊಂದರೆ, ಉದ್ಯೋಗ ಹಾಗೂ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಹಣ ಎಷ್ಟು ಬೇಕಾದರೂ ಕೊಡಲು ಸಿದ್ದ ಎಂದು ಭರವಸೆ ನೀಡಿದರು.
ನೀರಿನ ವಿಚಾರವಾಗಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಹಿಂದೆ ಬರಗಾಲ ಬಂದರೆ ಹಳ್ಳಿಗಾಡಿನ ಜನರು ತಮ್ಮ ದನಕರುಗಳನ್ನು ಮಾರಾಟ ಮಾಡಿ ಗುಳೆ ಹೋಗುತ್ತಿದ್ದರು. ಇಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಲು ನಮ್ಮ ಸರಕಾರ ಅನ್ನ ಭಾಗ್ಯದ ಮೂಲಕ ಪ್ರತಿ ವ್ಯಕ್ತಿಗೂ 7ಕೆಜಿ ಅಕ್ಕಿ, ಶಾಲೆಯಲ್ಲಿ ಮಕ್ಕಳಿಗೆ ಊಟ ಮತ್ತು ಹಾಲು ಕೊಡಲಾಗುತ್ತಿದೆ. ಇಷ್ಟೆಲ್ಲಾ ಕಾರ್ಯಕ್ರಮ ಇರುವುದರಿಂದ ಜನರು ಭಯಪಡುವಾಗಿಲ್ಲ ಎಂದರು.
ಸರ್ಟಿಫೈಡ್ ಆಲುಗೆಡ್ಡೆ ಬಿತ್ತನೆ ಬೀಜಕ್ಕಾಗಿ 6 ಕೋಟಿ ರೂ. ಗಳನ್ನು ಕೊಡಲಾಗಿದೆ. ಇಲ್ಲಿನ ಶಾಸಕರು ಹೆಚ್.ಎಸ್. ಪ್ರಕಾಶ್ ಹೇಳಿರುವಂತೆ ಬೂವನಹಳ್ಳಿ ಮಲ್ಟಿ ವಿಲೇಜ್ ಸ್ಕೀಂನಲ್ಲಿ ನೀರಿಗಾಗಿ ಅದಕ್ಕೂ ಹಣ ಮಂಜೂರಾತಿ ಮಾಡೋಣ ಎಂದರು. ಆಗೇ ಕೆರೆಗಳಿಗೆ ನೀರು ತುಂಬಿಸಿದರೇ ಅಂಡರ್ ವಾಟರ್ ಹೆಚ್ಚಾಗಿ, ಕೊಳವೆ ಬಾವಿ ರಿಚಾರ್ಜ್ ಮಾಡಲು ಅನುಕೂಲವಾಗುತ್ತದೆ. ಇದಕ್ಕೂ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ನಗರದಲ್ಲಿರುವ ಉದ್ಯಾನವನವನ್ನು ಅಭಿವೃದ್ಧಿ ಮಾಡಲು 2 ಕೋಟಿ ರೂ. ನೀಡಲಾಗುತ್ತಿದೆ. ಪಾರ್ಕ್ ಉತ್ತಮವಾಗಿದ್ದರೆ ವೃದ್ಧರಿಗೆ ಹಾಗೂ ಮಕ್ಕಳಿಗೆ ಅನುಕೂಲ. ನಗರ ಸೌದರ್ಯ ಕಾಣಲು ಮೊದಲು ಪಾರ್ಕ್ ಅಭಿವೃದ್ಧಿಯಾಗಬೇಕು. ಆಗ ಮಾಲಿನ್ಯ ಕಡಿಮೆ ಆಗುತ್ತದೆ. ಅದಕ್ಕೂ ಕೂಡ ಕೇಂದ್ರ ಮತ್ತು ರಾಜ್ಯ ಹಾಗೂ ನಗರಸಭೆಯ ನೆರವು ಇದೆ ಎಂದು ಹೇಳಿದರು.
ನಮ್ಮ ಸರಕಾರ ನಾಲ್ಕು ವರ್ಷ ಯಶಸ್ವಿಯಾಗಿ ಪೂರೈಸಿ ಈಗ 5ನೆ ವರ್ಷಕ್ಕೆ ಕಾಲಿಡುತ್ತಿದೆ. ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರುವುದಿಲ್ಲ ಎಂದು ಅನೇಕರು ಹೇಳಿಕೆ ನೀಡಿದ್ದರು. ಕಂಡಿತ 5 ವರ್ಷ ಪೂರೈಸಿ ಮುಂದಿನ ಸಿಎಂ ನಾನೇ ಆಗಿ ಬರುತ್ತೇನೆ. ಅದು ಶಾಸಕರಿಗೂ ಗೊತ್ತು ಎಂದು ಹೇಳಿದ ಅವರು ನಂತರ ಭರವಸೆ ಇದೆ ಎಂದು ಹೇಳಿದರು.
ಹಾಸನ ನಗರವನ್ನು ಕಾರ್ಪೋರೇಟ್ ನಗರವನ್ನಾಗಿ ಮಾಡಲು ವರದಿ ಪಡೆದು ಪರಿಶೀಲಿಸಿ ನಂತರ ತೀರ್ಮಾನಿಸುವುದಾಗಿ ಭರವಸೆ ನುಡಿದರು. ಭಾಷಣದಲ್ಲಿ ಶಾಸಕ ಹೆಚ್.ಎಸ್. ಪ್ರಕಾಶ್ ಅವರ ಮಾತಿಗೆ ಸಿಎಂ ನಗೆ ಬೀರಿ ತಲೆ ಆಡಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಮಾತನಾಡಿ, ಬಹುದಿನದ ಬೇಡಿಕೆ ಕುಡಿಯುವ ನೀರಿಗೆ ನೂರಕ್ಕೆ ನೂರು ಒತ್ತು ನೀಡಲಾಗಿದೆ. 120 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಅದಕ್ಕೆ ಮತ್ತೆ 24 ಕೋಟಿ ರೂ. ಹೆಚ್ಚಿನ ಅನುಧಾನ ದೊರಕಿದೆ. ಪ್ರತಿ ಮನೆಗೂ ಸತತ ನೀರು ಕೊಡುವ ಯೋಜನೆಗೆ ಇಂದು ಸಿಎಂ ಚಾಲನೆ ನೀಡಿದ್ದಾರೆ.
ಹಾಸನ ಸುತ್ತ-ಮುತ್ತ ಜನಸಂಖ್ಯೆ ಸಮೀಕ್ಷೆ ಮಾಡಿ ನಂತರ ಕಾರ್ಪೋರೇಷನ್‌ವನ್ನಾಗಿ ಘೋಷಣೆ ಮಾಡುವುದು. 2 ಕೋಟಿ ರೂ ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಗೊಳಿಸುವುದಕ್ಕೆ ಯೋಜನೆ ಮಾಡಲಾಗಿದೆ. ಹಲವಾರು ಟೀಕೆ ಟಿಪ್ಪಣಿಗಳು ಬಂದರೂ ನೀರಿನ ವ್ಯವಸ್ಥೆ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಅವರ ಮುತುವರ್ಜಿಗೆ ಅಭಿನಂದಿಸಿದರು.
160 ತಾಲೂಕುಗಳಿಗೂ ಶಾಸಕರ ಕ್ಷೇತ್ರಕ್ಕೆ 2 ಕೋಟಿಯಂತೆ ನೀಡಲಾಗಿದೆ. ನೀರಿನ ಕೊರತೆ ನೀಗಿಸಲು ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗಿದೆ. ಎಲ್ಲಾ ಕಡೆ ಬಹುತೇಕ ಮಳೆ ಆಗಿದ್ದು, ರೈತರು ಸಂತೋಷದಿಂದ ಆಲೂಗೆಡ್ಡೆ ಬಿತ್ತನೆ ಮಾಡಿದ್ದಾರೆ ಎಂದರು.
ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ನಗರದಲ್ಲಿ ಶಾಶ್ವತ ಕುಡಿಯುವ ನೀರಿಗೆ 117 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಕೇಂದ್ರ ಸರಕಾರ ಸೇರಿ ಕೊಟ್ಟಿದೆ. 35 ಕೋಟಿ ರೂ. ಗಳಲ್ಲಿ 10 ಕೋಟಿ ರೂ.ಗಳನ್ನು ನಗರಕ್ಕೆ ಕೊಡಬೇಕು. ವಿಶೇಷವಾಗಿ ಹಾಸನಕ್ಕೆ 10 ಕೋಟಿ ರೂ. ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಬಹುಗ್ರಾಮ ಯೋಜನೆಯಲ್ಲಿ ಕುಡಿಯುವ ನೀರಿಗೆ ಬೂವನಹಳ್ಳಿ, ಸತ್ಯಮಂಗಲ ಸೇರಿ ನೀರಿಗೆ ಅನುಕೂಲವಾಗಲಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು 500 ಕೋಟಿ ರೂ. ಗಳನ್ನು ಕೇಂದ್ರ ದಿಂದ ಕೇಳಿದ್ದಾರೆ. ಹಣ ಬಂದರೆ 24 ಗಂಟೆಯು ನೀರು ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂತನ ಹುಡಾ ಅಧ್ಯಕ್ಷರು ಕೃಷ್ಣಕುಮಾರ್, ಸದಸ್ಯರು ಸತ್ಯಮಂಗಲ ಗ್ರಾಪಂನ ಮೋಹನ್ ಕುಮಾರ್, ತಾರಾ ಚಂದನ್ ಸೇರಿದಂತೆ ಇತರರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಮಂತ್ರಿ ಎ. ಮಂಜು ಅವರನ್ನು ಸನ್ಮಾನಿಸಿ ಗೌರವಿಸಿದರು.
ಇದೆ ವೇಳೆ ನಗರಸಭೆ ಅಧ್ಯಕ್ಷ ಎಚ್.ಎಸ್. ಅನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಹುಡಾ ಅಧ್ಯಕ್ಷ ಕೃಷ್ಣಕುಮಾರ್, ಜಿಪಂ ಅಧ್ಯಕ್ಷೆ ಶ್ವೇತ ದೇವರಾಜು, ಹೆಚ್.ಪಿ. ಮೋಹನ್, ಹೆಚ್.ಎಂ. ವಿಶ್ವನಾಥ್ ಇತರರು ಇದ್ದರು.







