ಉಪಹಾರ ವಿಚಾರದಲ್ಲಿ ಆಡಿರುವ ಮಾತಿಗೆ ಸಿಎಂ ಕ್ಷಮೆ ಕೇಳಲಿ: ಕೆ.ಎಸ್. ಈಶ್ವರಪ್ಪ ಒತ್ತಾಯ
ಹಾಸನ, ಮೇ 21: ದಲಿತರ ಮನೆಯಲ್ಲಿ ಉಪಹಾರದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಆಡಿರುವ ಮಾತುಗಳಿಗೆ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡರು ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.
ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದಲಿತರ ಮನೆಯಲ್ಲಿ ಹೊಟೇಲ್‌ನಿಂದ ತಿಂಡಿ ತರಿಸಿ ಸೇವಿಸಿದ್ದಾರೆ ಎಂದು ವ್ಯಂಗ್ಯವಾಗಿ ಮಾತನಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಬ್ಬರೂ ದಲಿತರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರ ಹೇಳಿಕೆಗೆ ತಿರುಗೇಟು ನೀಡಿದರು.
ನಾವು ಅವರ ಮನೆಗೆ ಹೋಗಿದ್ದೆವು. ಅಲ್ಲಿ ಅವರು ಫೈವ್ ಸ್ಟಾರ್ ಹೊಟೇಲ್ ನಿಂದ ತಿಂಡಿ ತಂದಿದ್ದರೋ ಅಥವಾ ಮನೆಯಲ್ಲೇ ತಯಾರಿಸಿದ್ದರೋ ನಮಗೆ ಗೊತ್ತಿಲ್ಲಾ. ಅದು ನಮಗೆ ಮುಖ್ಯವೂ ಅಲ್ಲಾ. ನಮಗೆ ಅವರು ತೋರಿಸಿದ ಪ್ರೀತಿ ಹಾಗು ವಿಶ್ವಾಸ ಅತೀ ಮುಖ್ಯ. ಕೀಳರಿಮೆ ಹೋಗಲಾಡಿಸುವ ಉತ್ತಮ ಉದ್ದೇಶವಿತ್ತೇ ಹೊರತು ಬೇರೇ ಯಾವ ಭಾವನೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಈ ವಿಚಾರವನ್ನು ಕೀಳಾಗಿ ನೋಡುವ ಜೊತೆಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ. ದಲಿತರ ಮನೆಯಲ್ಲಿ ಉಪಹಾರದ ವಿಷಯ ಮಾತನಾಡಿರುವವರು ಕೂಡಲೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ದೇವೇಗೌಡರು ಹಿರಿಯರು ಹಾಗು ಅನುಭವಸ್ಥರು. ಜಂತಕಲ್ ಪ್ರಕರಣದಲ್ಲಿ ತಪ್ಪಿತಸ್ಥರು ಯಾರಿದ್ದಾರೋ ಅವರು ಶಿಕ್ಷೆ ಅನು ಭವಿಸಲಿದ್ದಾರೆ. ಅದಕ್ಕೆ ಬಿಜೆಪಿ ಕಾರಣವಲ್ಲಾ. ಕಾಂಗ್ರೆಸ್ ಮುಕ್ತ ರಾಜ್ಯ ನಿರ್ಮಾಣ ಮಾಡುವುದೇ ಮುಖ್ಯ ಗುರಿ. ಆದರೆ ಜೆಡಿಎಸ್ ಮುಗಿಸುವ ತಂತ್ರಗಾರಿಕೆ ಮಾಡಿರುವುದಿಲ್ಲ ಎಂದು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಹಣಿಯಲು ತಂತ್ರ ರೂಪಿಸುತ್ತಿವೆ ಎಂದು ದೇವೇಗೌಡರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿ ನೀಡಿದರು.