ಕವಿತೆಗಳಲ್ಲಿ ಗಟ್ಟಿತನದ ಕೊರತೆ: ಕವಿ ಕೃಷ್ಣದೇವಾಂಗ ಮಠ
ಬೆಂಗಳೂರು, ಮೇ 21: ಇಂದಿನ ದಿನಗಳಲ್ಲಿ ಹಲವರು ಕವಿತೆಗಳನ್ನು ರಚಿಸುತ್ತಿದ್ದರೂ, ಅದರಲ್ಲಿ ಸಾರಾಂಶವುಳ್ಳ ಕವಿತೆಗಳ ಕೊರತೆ ಕಾಡುತ್ತಿದೆ ಎಂದು ಯುವ ಕವಿ ಕೃಷ್ಣದೇವಾಂಗ ಮಠ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಅನಿಕೇತನ ಕನ್ನಡ ಬಳಗ, ಪರಸ್ಪರ ಸ್ನೇಹ ಬಳಗ ಹಾಗೂ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಯುವ ಕಾವ್ಯ ಪ್ರತಿಭಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಬಹುತೇಕ ಯುವ ಕವಿಗಳು ರಚಿಸುತ್ತಿರುವ ಕವಿತೆಗಳಲ್ಲಿ ಗಟ್ಟಿತನದ ಕೊರತೆ ಕಾಡುತ್ತಿದೆ. ಹೀಗಾಗಿ ಕವಿಗಳು ಕವಿತೆ ರಚಿಸುವ ಮೊದಲು ಕವಿಗಳು ಅಧ್ಯಯನ ಮಾಡಬೇಕು. ಅದಕ್ಕಾಗಿ ಹೆಚ್ಚಿನ ಸಮಯ ಮೀಸಲಿಡಬೇಕು. ಆಗ ಮಾತ್ರ ಉತ್ತಮವಾದ ಕವಿತೆ ಓದುಗರಿಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ಹಲವು ಸಂದರ್ಭಗಳಲ್ಲಿ ಪ್ರಶಸ್ತಿಗಳು, ಪುರಸ್ಕಾರಗಳು ಕವಿಗಳನ್ನು ಪ್ರಬುದ್ಧರನ್ನಾಗಿ ಬರೆಯುವುದನ್ನು ತಪ್ಪಿಸುತ್ತವೆ. ಆದರೆ, ಇದೇ ವೇಳೆ ಕೆಲವು ಸಂದರ್ಭದಲ್ಲಿ ಕವಿ ರಚಿಸಿದ ಕವಿತೆಗೆ ಪ್ರಶಸ್ತಿ ಸಿಕ್ಕಾಗ ಆ ಕವಿತೆ ಧೀರ್ಘಾಯುಷ್ಯವಾಗುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಕವಿಗಳನ್ನು ಆಯ್ಕೆ ಮಾಡಿ ಪುರಸ್ಕರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಕಸಾಪ ನಗರ ಜಿಲ್ಲಾ ಅಧ್ಯಕ್ಷ ಮಾಯಣ್ಣ ಮಾತನಾಡಿ, ನಾಡು-ನುಡಿ ಸೇವೆ ಮಾಡುವ ಪ್ರತಿಯೊಬ್ಬರನ್ನೂ ಗುರುತಿಸುವ ನಿಟ್ಟಿನಲ್ಲಿ ನಗರ ಜಿಲ್ಲಾ ಕಸಾಪ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಇತ್ತೀಚಿಗೆ ದಿನಪತ್ರಿಕೆಯೊಂದರಲ್ಲಿ ‘ಆದರ್ಶ ದಂಪತಿ’ ಎಂದರೆ ಏನು ಎಂದು ಪ್ರಶ್ನಿಸಿ ವರದಿ ಪ್ರಕಟಿಸಿದ್ದಾರೆಂದು ದೂರಿದರು.
ಕನ್ನಡಕ್ಕಾಗಿ ಯಾರು ಕೆಲಸ ಮಾಡುತ್ತಾರೆಯೋ ಅವರನ್ನು ನಾವು ಗುರುತಿಸುತ್ತಿದ್ದೇವೆ. ಆದರೆ, ಕೆಲವರು ನಮ್ಮ ಕೆಲಸವನ್ನು ಸಹಿಸದೇ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದ ಅವರು, ರಾಮ ಸೀತೆಯನ್ನು ಕಾಡಿಗೆ ಕಳಿಸಿದ, ವೆಂಕಟರಮಣಸ್ವಾಮಿ, ಶಿವ, ನಾರಾಯಣ ಎರಡು ಎರಡು ಹೆಂಡತಿಯರನ್ನು ಕಟ್ಟಿಕೊಂಡರು. ಇವರನ್ನು ಆದರ್ಶವೆಂದು ಭಾವಿಸುತ್ತಿರುವ ಈ ಸಂದರ್ಭದಲ್ಲಿ ನಾಡು-ನುಡಿಗಾಗಿ ಸೇವೆ ಸಲ್ಲಿಸಿದವರನ್ನು ಆದರ್ಶ ದಂಪತಿ ಎಂದರೆ ತಪ್ಪಾಗುತ್ತದೆಯಾ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಯಶವಂತಪುರ ಕ್ಷೇತ್ರದ ಕಸಾಪ ಅಧ್ಯಕ್ಷ ಬಿ.ಟಿ. ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು. ಇದೇ ವೇಳೆ ಕುವರಯಲ್ಲಪ್ಪ ಮತ್ತು ಗಾಯತ್ರಿ ರಮೇಶ್, ರೇವಣ್ಣ ಸಿದ್ದಪ್ಪ ಮತ್ತು ಮಂಗಳಾಪಡಶೆಟ್ಟಿ, ಮೊಹಮ್ಮದ್ ಮುನಾಫ್ ಮತ್ತು ಹಸೀನಾ ಹಾಗೂ ವೇದಾ ಮಂಜುನಾಥನ್ ಮತ್ತು ಮಂಜುನಾಥನ್ ಅವರಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.







