ರೌಡಿ ನಾಗನ ಪತ್ನಿ ಲಕ್ಷ್ಮೀ ಬಂಧನ
ಬೆಂಗಳೂರು, ಮೇ 21: ಹಳೆ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಬಂಧಿತನಾಗಿರುವ ರೌಡಿ ವಿ.ನಾಗರಾಜ್ ಪತ್ನಿ ಲಕ್ಷ್ಮೀಯನ್ನೂ ಮಲ್ಲೇಶ್ವರಂ ಪೊಲೀಸ್ ಠಾಣೆಯ ಎಸಿಪಿ ಪೊಲೀಸರ ತಂಡ ಬಂಧಿಸಿ, ಹೆಣ್ಣೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧನದಲ್ಲಿರುವ ನಾಗನನ್ನು ವಿಚಾರಣೆಗೊಳಪಡಿಸಿದಾಗ ನೋಟು ದಂಧೆ ಬದಲಾವಣೆಯಲ್ಲಿ ಪತ್ನಿ ಲಕ್ಷ್ಮೀಯ ಪಾತ್ರವೂ ಇದೆ ಎಂದು ಹೇಳಿದ್ದ ಎನ್ನಲಾಗಿದೆ. ಹೀಗಾಗಿಯೇ, ಲಕ್ಷ್ಮೀ ರವಿವಾರ ಬೆಂಗಳೂರಿನಲ್ಲಿರುವ ಶ್ರೀರಾಂಪುರದ ತಮ್ಮ ಮನೆಗೆ ಆಗಮಿಸುತ್ತಿದ್ದಂತೆ, ಮಲ್ಲೇಶ್ವರಂ ಎಸಿಪಿ ತಂಡದ ಪೊಲೀಸರು ಲಕ್ಷ್ಮೀಯನ್ನು ಬಂಧಿಸಿ, ಹೆಣ್ಣೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಪರಿವರ್ತನೆ ಮಾಡುತ್ತಿದ್ದ ನಾಗನಿಗೆ ಆತನ ಪತ್ನಿ ಲಕ್ಷ್ಮೀಯೂ ಸಹಾಯ ಮಾಡುತ್ತಿದ್ದಳು. ಆದರೆ, ಪೊಲೀಸರು ನಾಗನನ್ನು ಬಂಧಿಸಿದ ವಿಚಾರ ತಿಳಿಯುತ್ತಿದ್ದಂತೆ ಲಕ್ಷ್ಮೀ ಶ್ರೀರಾಂಪುರದಲ್ಲಿರುವ ಮನೆಯಿಂದ ನಾಪತ್ತೆಯಾಗಿದ್ದಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಲಕ್ಷ್ಮಿ ಧರ್ಮಸ್ಥಳಕ್ಕೆ ತೆರಳಿ ನಾಲ್ಕು ದಿನಗಳಿಂದ ತನ್ನ ಮೊಬೈಲ್ ಬಂದ್ ಮಾಡಿಕೊಂಡಿದ್ದರು. ಅಲ್ಲದೆ, ಪೊಲೀಸರ ತಂಡ ಲಕ್ಷ್ಮೀಗಾಗಿ ಹುಡುಕಾಟ ನಡೆಸುತ್ತಿದ್ದ ಬಗ್ಗೆ ಆಕೆಗೂ ತಿಳಿದಿತ್ತು. ಸದ್ಯ ಹೆಣ್ಣೂರು ಪೊಲೀಸರು ಲಕ್ಷ್ಮೀಯನ್ನು ವಿಚಾರಣೆ ನಡೆಸಿ ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.







