ದಲಿತರ ಮನೆಯಲ್ಲಿ ಬಿಜೆಪಿ ಮುಖಂಡರ ಊಟ ಸಾಧನೆಯೆಂದು ಭಾವಿಸಿದ್ದರೆ ಅದು ದಲಿತರಿಗೆ ಮಾಡಿದ ಅಪಮಾನ: ಖರ್ಗೆ

ಬೆಂಗಳೂರು, ಮೇ 21: ದಲಿತರ ಮನೆಯಲ್ಲಿ ಊಟ ಮಾಡುವುದನ್ನೇ ಒಂದು ಸಾಧನೆ ಎಂದು ಭಾವಿಸಿದರೆ ಅದು ದಲಿತ ಸಮುದಾಯಕ್ಕೆ ಮಾಡುವ ಅಪಮಾನ. ಅಂದ್ರೆ ನೀವೂ ಇನ್ನೂ ಅವರನ್ನು (ದಲಿತರನ್ನು) ಹಿಂದೂಗಳೆಂದು ಭಾವಿಸಿಲ್ಲವೇ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ರವಿವಾರ ಚಿತ್ರದುರ್ಗ ಜಿಲ್ಲೆಯ ಮೇಟಿಕುರ್ಕೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಹಿಂದೂಗಳು ನಾವೆಲ್ಲ ಒಂದು’ ಎಂದು ಬಿಜೆಪಿಯರು ಹೇಳ್ತಾರೆ. ಆದರೆ, ಅಸ್ಪಶ್ಯರ ಮನೆಯಲ್ಲಿ ಹೋಗಿ ನಾವೂ ಊಟ ಮಾಡ್ತಿದ್ದೀವಿ ಅಂತ ಹೇಳಿದರೆ ಅದೊಂದು ಸಾಧನೆಯೇ ಎಂದು ಪ್ರಶ್ನಿಸಿದರು.
ದಲಿತರು ನಮ್ಮಿಳಗೆ ಅವರೂ ಒಂದು ಎಂದು ಬಿಜೆಪಿಯವರು ಅಂದುಕೊಂಡಿಲ್ಲ. ಬಿಜೆಪಿ ಮುಖಂಡರಿಗೆ ನಾಚಿಕೆಯಾಗಬೇಕು ಎಂದ ಮಲ್ಲಿಕಾರ್ಜುನ ಖರ್ಗೆ, 12ನೆ ಶತಮಾನದಲ್ಲೆ ಬಸವಣ್ಣ ದಲಿತರು ಮತ್ತು ಸವರ್ಣಿಯರ ವಿವಾಹ ಮಾಡಿಸಿ ಅಸ್ಪಶ್ಯತೆ ನಿವಾರಿಸಲು ಪ್ರಯತ್ನಿಸಿದ್ದರು ಎಂದು ಸ್ಮರಿಸಿದರು.
ಶಿಫಾರಸ್ಸು ಸಲ್ಲ: ನೀತಿ ಆಯೋಗ ರೈತರ ಬೆಳೆಗಳ ಮೇಲೆ ತೆರಿಗೆ ವಿಧಿಸಲು ಶಿಫಾರಸ್ಸು ಮಾಡಿರುವುದು ಸರಿಯಲ್ಲ. ಇದನ್ನು ದೇಶದ ರೈತರು ಸಹಿಸುವುದಿಲ್ಲ. ಇಂತಹ ಕೆಟ್ಟ ಯೋಜನೆ ನೀತಿ ಆಯೋಗಕ್ಕೆ ಏಕೆ ಬಂತೋ ಗೊತ್ತಿಲ್ಲ. ಈ ಶಿಫಾರಸ್ಸನ್ನು ಕೇಂದ್ರ ಕೂಡಲೇ ಕೈಬಿಡಬೇಕೆಂದು ಖರ್ಗೆ ಆಗ್ರಹಿಸಿದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿದ್ದ ಕೇಂದ್ರದ ಮೋದಿ ಸರಕಾರ ಮೂರು ವರ್ಷಗಳ ಅವಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಿಲ್ಲ ಎಂದು ದೂರಿದ ಅವರು, ಅಪೇಕ್ಷಿತ ಮಟ್ಟದಲ್ಲಿ ಬಂಡವಾಳ ಹೂಡಿಕೆಯೂ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದ ಮೂರು ವರ್ಷದ ಸಾಧನೆ ಶೂನ್ಯ. ಚುನಾವಣಾ ಪ್ರಣಾಳಿಕೆಯಲ್ಲಿ ವಾಗ್ದಾನಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ವಿಫಲ. ದೇಶದ ಎಲ್ಲ ಜನರ ಖಾತೆಗೆ 15 ಲಕ್ಷ ರೂ. ಕಪ್ಪು ಹಣ ನೀಡುವ ಭರವಸೆಯೂ ಭರವಸೆಯಾಗಿಯೇ ಉಳಿದಿದೆ ಎಂದರು.







