‘ಫಲಾಹ್ ಎಜುಕೇರ್ ಶಿಬಿರ’, ಸನ್ಮಾನ ಕಾರ್ಯಕ್ರಮ
ಸನ್ಮಾನ ಕಾರ್ಯಕ್ರಮ

ಮಂಗಳೂರು, ಮೇ 21: ಜಮೀಯತುಲ್ ಫಲಾಹ್ ಮಂಗಳೂರು ಘಟಕವು ಜೆಎಫ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ‘ಫಲಾಹ್ ಎಜುಕೇರ್ ಶಿಬಿರ’ವನ್ನು ದ.ಕ. ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಉದ್ಘಾಟಿಸಿದರು.
ಜಮೀಯತುಲ್ ಫಲಾಹ್ ಅಧ್ಯಕ್ಷ ನ್ಯಾಯವಾದಿ ಅಬ್ದುಲ್ ಅಝೀಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಶರೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದ ಸರ್ಫ್ರಾಝ್ ಹಾಶಿಮ್, ಸೈಯದ್ ಅಮೀನ್, ನಬೀಲ್ ಅಹ್ಮದ್ ಮತ್ತು ಹನೀಫ್ ಮಾಸ್ಟರ್ ವೃತ್ತಿ ಮಾರ್ಗದರ್ಶನ, ಸಿ.ಇ.ಟಿ. ಕೌನ್ಸೆಲಿಂಗ್, ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಸೌಲಭ್ಯ, ನಾಗರಿಕಾ ಸೇವಾ ಪರೀಕ್ಷೆ ಮತ್ತು ಸರಕಾರಿ ಉದ್ಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಡಾದ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಜಮೀಯತುಲ್ ಫಲಾಹ್ ಪಪೂ ಕಾಲೇಜಿನ ಪ್ರಾಂಶುಪಾಲ ಅಬೂಬಕರ್ ಮತ್ತು ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಬಿ.ಎಸ್.ಮುಹಮ್ಮದ್ ಬಶೀರ್ ವಂದಿಸಿದರು.