ರಜನಿಕಾಂತ್ ರಾಜಕೀಯ ಪ್ರವೇಶ ವಿರೋಧಿಸಿ ಪ್ರತಿಭಟನೆ,ಹಲವರ ಬಂಧನ

ಚೆನ್ನೈ,ಮೇ 22: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರು ರಾಜಕೀಯವನ್ನು ಪ್ರವೇಶಿಸಲಿದ್ದಾರೆ ಎಂಬ ವದಂತಿಗಳ ನಡುವೆಯೇ ಪ್ರತಿಭಟನೆ ಭುಗಿಲ್ಲೆದ್ದಿದೆ. ರಜನಿ ರಾಜಕೀಯ ಪ್ರವೇಶವನ್ನು ವಿರೋಧಿಸಿ ಸೋಮವಾರ ಇಲ್ಲಿಯ ಪೋಯೆಸ್ ಗಾರ್ಡನ್‌ನಲ್ಲಿರುವ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಸಾಗುತ್ತಿದ್ದ ಜಾಥಾವನ್ನು ಒಂದು ಕಿ.ಮೀ.ದೂರದಲ್ಲಿಯೇ ತಡೆದ ಪೊಲೀಸರು ತಮಿಳರ್ ಮುನ್ನೇತ್ರ ಪಾಡೈ(ಟಿಎಂಪಿ)ನ 30 ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಟಿಎಂಪಿ ನಾಯಕಿ ವೀರಲಕ್ಮಿ ನೇತೃತ್ವದಲ್ಲಿ ರಜನಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರಾಜ್ಯವನ್ನು ಆಳಬಲ್ಲ ಕೋಟ್ಯಂತರ ತಮಿಳರು ತಮಿಳುನಾಡಿ ನಲ್ಲಿದ್ದಾರೆ ಮತ್ತು ನೆರೆಯ ರಾಜ್ಯದಿಂದ ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿರುವ ನಟ ರಜನಿ ನಮ್ಮನ್ನು ಆಳುವುದು ನಮಗೆ ಬೇಕಾಗಿಲ್ಲ ಎಂದು ಪ್ರತಿಪಾದಿಸಿದರು.
ಪೊಲೀಸರು ಜಾಥಾವನ್ನು ಕೆಥೆಡ್ರಲ್ ರಸ್ತೆಯಲ್ಲಿ ತಡೆದು ನಿಲ್ಲಿಸಿದ ಬಳಿಕ ಪ್ರತಿಭಟನಾ ಕಾರರು ರಜನಿಯವರ ಪ್ರತಿಕೃತಿಯನ್ನು ದಹಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ರಜನಿ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ.





