ಸಿದ್ದರಾಮಯ್ಯ ನೇತೃತ್ವದ ಸರಕಾರ ನುಡಿದಂತೆ ನಡೆದಿದೆ: ಸಚಿವ ಯು.ಟಿ. ಖಾದರ್

ಬೆಳ್ತಂಗಡಿ, ಮೇ 22: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಮುಂದಿನ ಚುನಾವಣೆಯಲ್ಲಿಯೂ ಪಕ್ಷ ಸ್ಪಷ್ಟವಾದ ಬಹು ಮತದೊಂದಿಗೆ ಗೆಲುವನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಹೇಳಿದರು.
ಅವರು ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಕಾಂಗ್ರೆಸ್ ಸರಕಾರದ ನಾಲ್ಕು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಶಾಸಕ ವಸಂತ ಬಂಗೇರ ಸಾಧನಾ ಸಮಾವೇಶ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದೊಡನೆಯೇ ಕಾಂಗ್ರೆಸ್ ಮುಕ್ತದ ಮಾತಾಡುತ್ತಿದೆ. ಆದರೆ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಕೂಡಲೇ ಹಸಿವು ಮುಕ್ತ ಕರ್ನಾಟಕ ಮಾಡುತ್ತೇವೆ ಎಂದರು. ಇದೆಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ರಾಜ್ಯ ಸರಕಾರದ ನಾಲ್ಕು ವರ್ಷದ ಸಾಧನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಸರಕಾರ ಕಾರ್ಯನಿರ್ವಹಿಸುತ್ತಿದೆ ಎಂದ ಅವರು ಕೇಂದ್ರದ ಬಿಜೆಪಿ ಸರಕಾರ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ರಾಜ್ಯದ ಬಿಜೆಪಿಯಲ್ಲಿ ಅಧಿಕಾರಕ್ಕೆ ಬರುವ ಮೊದಲೇ ಕಚ್ಚಾಟ ಆರಂಭವಾಗಿದೆ. ಕಳೆದ ಬಾರಿ ಅಧಿಕಾರ ಪಡೆದಾಗ ಕಚ್ಚಾಡಿ ಜೈಲಿಗೆ ಹೋದವರು ಈಗ ಚುನಾವಣೆಗಿಂತ ಮೊದಲೇ ಕಚ್ಚಾಟ ಆರಂಭಿಸಿದ್ದಾರೆ. ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಕೆ ವಸಂತ ಬಂಗೇರ ಅವರು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಹೆಚ್ಚಿನ ಭರವಸೆಗಳನ್ನು ಈಡೇರಿಸಿದೆ. ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಬರಲಿದೆ ಎಂದರು.
1983 ರಲ್ಲಿ ಮೊದಲು ಶಾಸಕನಾದಾಗಿನಿಂದ ಇಂದಿನ ವರೆಗೂ ತಾಲೂಕಿನ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇನೆ ಈ ಮೂರು ದಶಕಗಳಲ್ಲಿ ತಾಲೂಕಿನ ಚಿತ್ರಣವೇ ಬದಲಾಗಿ ಹೋಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 679 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ ಉಳಿದ 11 ತಿಂಗಳಲ್ಲಿ ಉಳಿದ ಬೇಡಿಕೆಗಳ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದೇನೆ. ವಿಶೇಷ ಅನುದಾನವಾಗಿ 300 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಹಾಗೂ ಪಕ್ಷದ ಕಾರ್ಯಕರ್ತರ ಪರವಾಗಿ ಶಾಸಕ ಕೆ ವಸಂತ ಬಂಗೇರ ಅವರನ್ನು ಸನ್ಮಾನಿಸಲಾಯಿತು.
ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಶಾಹುಲ್ ಹಮೀದ್, ಪಕ್ಷದ ಮುಖಂಡರುಗಳಾದ ಇ ಸುಂದರಗೌಡ, ಲೋಕೇಶ್ವರಿ ವಿನಯಚಂದ್ರ, ಮಾತನಾಡಿ ಪಕ್ಷ ಸಂಘಟನೆಗೆ ಮುಂದಾಗುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯರುಗಳಾದ ಶ್ರೀನಿವಾಸ ವಿ ಕಿಣಿ, ರಾಜಶೇಖರ ಅಜ್ರಿ, ಪಕ್ಷದ ಮುಖಂಡರುಗಳಾದ ಪೀತಾಂಬರ ಹೆರಜೆ, ಉಮ್ಮರ್ ಕುಂಞಿ ಮುಸ್ಲಿಯಾರ್, ರಾಮಚಂದ್ರ ಗೌಡ, ಜಿ ಪಂ ಸದಸ್ಯರುಗಳಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ನಮಿತ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಭಿನಂದನ್ ಹಾಗೂ ಇತರರು ಉಪಸ್ಥಿತರಿದ್ದರು.
ಫ್ರಾನ್ಸೀಸ್ ವಿವಿ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ ವಸಂತ್ ವಂದಿಸಿದರು.
ಕರ್ನಾಟಕದ ಅಧಿಕಾರಿಯೋರ್ವರು ಉತ್ತರಪ್ರದೇಶದಲ್ಲಿ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದಾರೆ. ಇದನ್ನು ಮುಂದಿಟ್ಟುಕೊಂಡು ಹಿಂದಿನಂತೆಯೇ ರಾಜ್ಯದ ವಿರೋಧ ಪಕ್ಷಗಳು ರಾಜಕೀಯ ಶುರುಮಾಡಿದ್ದಾರೆ. ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದು ಇವರಿಗೇನು ಹೊಸದಲ್ಲ. ಈ ಹಿಂದೆಯೂ ಇದನ್ನೇ ಮಾಡಿದ್ದರು. ಇದೀಗ ಯಾವ ಮಾಹಿತಿ ದಾಖಲೆಗಳೂ ಇಲ್ಲದೆ ಎರಡು ಸಾವಿರ ಕೋಟಿಯ ಅವ್ಯವಹಾರ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷದ ಮಹತ್ವದ ಸ್ಥಾನಗಳಲ್ಲಿರುವವರು ಜವಾಬ್ದಾರಿ ಅರಿತು ಮಾತನಾಡಲಿ.
- ಸಚಿವ ಯು.ಟಿ ಖಾದರ್.







