ಮಾಸಾಂತ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಗೊಂದಲ ನಿವಾರಣೆ: ಕೆ.ಸಿ.ವೇಣುಗೋಪಾಲ್
ಬೆಂಗಳೂರು, ಮೇ 22: ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಬೇಕೆ ಅಥವಾ ಹಾಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನೆ ಮುಂದುವರೆಸಬೇಕೆ ಎಂಬುದರ ಕುರಿತು ಈ ತಿಂಗಳ ಅಂತ್ಯದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಸೋಮವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧಗೊಳಿಸಲು ಇಂದಿನಿಂದ ಐದು ದಿನಗಳ ಕಾಲ ಎಲ್ಲಾ ಜಿಲ್ಲೆಗಳ ಸಚಿವರು, ಶಾಸಕರು ಹಾಗೂ ಮುಖಂಡರ ಸರಣಿ ಸಭೆ ನಡೆಯಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ನೇಮಕದ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ತುಸು ಕೋಪದಿಂದಲೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ಎಲ್ಲ ವಿಚಾರಗಳನ್ನು ನೀವೇ ನಿರ್ಧಾರ ಮಾಡುತ್ತೀರಾ, ಈ ತಿಂಗಳ ಅಂತ್ಯದಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಈಗಾಗಲೆ ಸ್ಪಷ್ಟಪಡಿಸಿದ್ದೇನಲ್ಲ ಎಂದರು.
Next Story