ಕಾಂಗ್ರೆಸ್ಸಿಗರಿಂದ ಅಪಪ್ರಚಾರ: ಯಡಿಯೂರಪ್ಪ
ದಲಿತ ಮನೆಯಲ್ಲಿ ಉಪಾಹಾರ ಸೇವನೆ

ಬಾಗಲಕೋಟೆ, ಮೇ 22: ದಲಿತ ಕೇರಿಗೆ ಭೇಟಿ ನೀಡಿ, ಅಲ್ಲಿ ತಿಂಡಿ ಸೇವಿಸಿ, ಅವರೊಂದಿಗೆ ಸಮಾಲೋಚನೆ ನಡೆಸಿ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಕಾಂಗ್ರೆಸ್ಸಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾವೂ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ್ದ ಬಗ್ಗೆ ಬೇರೆ-ಬೇರೆ ಬಣ್ಣ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಇವತ್ತು ನಗರದ ದಲಿತ ಕಾಲನಿಗೆ ಭೇಟಿ ನೀಡಿದ್ದು ಅವರು ನೀಡಿದ ಉಪಾಹಾರವನ್ನು ಸೇವಿಸಿದ್ದೇನೆ ಎಂದು ಹೇಳಿದರು.
ಬಡವರು, ದೀನ-ದಲಿತರ ಕಷ್ಟ-ಕಾರ್ಪಣ್ಯಗಳನ್ನು ವಿಚಾರಿಸಿ ಬಂದಿದ್ದೇನೆ. ಇನ್ನು ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುತ್ತೇನೆಂದ ಯಡಿಯೂರಪ್ಪ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷ, ಅವರ ಅಂತ್ಯ ಸಂಸ್ಕಾರಕ್ಕೆ ಹೊಸದಿಲ್ಲಿಯಲ್ಲಿ ಅವಕಾಶ ಕಲ್ಪಿಸದೆ ಮುಂಬೈನಲ್ಲಿ ನೆರವೇರಿಸುವಂತೆ ಮಾಡಿತು. ಆದರೆ, ಅದೇ ಪಕ್ಷ ದೀನ-ದಲಿತರ ಬಗ್ಗೆ ಮಾತನಾಡುತ್ತಿದೆ ಎಂದು ಟೀಕಿಸಿದರು.
ಇಂತಹ ಕಾಂಗ್ರೆಸ್ ಪಕ್ಷದವರು ನಮಗೆ ಉಪದೇಶ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ದಲಿತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಡೋಂಗಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಬೇಕು. ಅಲ್ಲದೆ, ದಲಿತ ಬಂಧುಗಳು ವಾಸ್ತವ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.







