ವೈದ್ಯೆಯ ನಿರ್ಲಕ್ಷಕ್ಕೆ ಮಹಿಳೆಯ ಗರ್ಭಕೋಶಕ್ಕೆ ಕುತ್ತು: ದೂರು
ಮಂಗಳೂರು, ಮೇ 22: ನಗರದ ಭಟ್ ನರ್ಸಿಂಗ್ ಹೋಂನಲ್ಲಿ ಹೆರಿಗೆಗೆ ದಾಖಲಾಗಿದ್ದ ತನ್ನ ಪತ್ನಿ ಶಹದಾ ಎಂಬವರ ಶಸ್ತ್ರಚಿಕಿತ್ಸೆಯ ಸಂದರ್ಭ ಅಲ್ಲಿನ ವೈದ್ಯೆ ವಹಿಸಿದ ನಿರ್ಲಕ್ಷದಿಂದ ಆಕೆಯ ಗರ್ಭಕೋಶವನ್ನೇ ತೆಗೆದ ಕಾರಣ ಇದೀಗ ಆಕೆ ಚಿಂತಾಜನಕ ಸ್ಥಿತಿಯಲ್ಲಿ ನರಳುವಂತಾಗಿದೆ ಎಂದು ಹರೇಕಳ ನಿವಾಸಿ ಹೈದರ್ ಆರೋಪಿಸಿದ್ದಾರೆ.
ಗರ್ಭವತಿಯಾಗಿದ್ದ ತನ್ನ ಪತ್ನಿಯನ್ನು ಆರಂಭದಿಂದಲೂ ತಪಾಸಣೆ ನಡೆಸುತ್ತಿದ್ದ ವೈದ್ಯೆ ಡಾ. ವೀಣಾ ಭಟ್, ಸಹಜ ಹೆರಿಗೆಯಾಗುತ್ತದೆ ಎಂದು ಹೇಳಿದ್ದರೂ, ಕೊನೆ ಘಳಿಗೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ ವೇಳೆ ಆದ ನಿರ್ಲಕ್ಷದಿಂದಾಗಿ ತೀವ್ರ ರಕ್ತಸ್ರಾವಕ್ಕೆ ಕಾರಣವಾಗಿ ಪ್ರಸ್ತುತ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದು ನಡೆದಾಡಲಾಗದ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೈದರ್‌ರವರು ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘‘27ರ ಹರೆಯದ ಶಹದಾ ಗರ್ಭಿಣಿಯಾದ ಮೊದಲ ತಿಂಗಳಿನಿಂದಲೂ ಡಾ. ವೀಣಾ ಭಟ್‌ರವರಲ್ಲಿ ತಪಾಸಣೆ ನಡೆಸುತ್ತಿದ್ದರು. ಪ್ರತಿ ತಿಂಗಳು ತಪಾಸಣೆ ನಡೆಸಿ ಔಷಧಿ, ರಕ್ತ ಪರೀಕ್ಷೆ, ಸ್ಕಾನಿಂಗ್ ನಡೆಸಿ ಮೇ 25ರಂದು ಸಹಜ ಹೆರಿಗೆಯಾಗುವುದಾಗಿ ಹೇಳಿದ್ದರು. ಆದರೆ ಮೇ 10ರಂದು ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಭಟ್ ನರ್ಸಿಂಗ್ ಹೋಂಗೆ ಬೆಳಗ್ಗೆ 11 ಗಂಟೆಗೆ ದಾಖಲಿಸಲಾಗಿತ್ತು. ಆಗ ಸಿಸೇರಿಯನ್ ಮಾಡಬೇಕೆಂದು ವೈದ್ಯೆ ಹೇಳಿದಕ್ಕೆ ನಾನು ಹಾಗೂ ಮನೆಯವರು ಒಪ್ಪಿಕೊಂಡೆವು. ಆದರೆ ಹೆರಿಗೆಯ ಸಂದರ್ಭ ಆದ ಎಡವಟ್ಟಿನಿಂದ ಶಹದಾ ತೀವ್ರ ರಕ್ತಸ್ರಾವದಿಂದ ನರಳಲಾರಂಭಿಸಿದರು. ಶಿಶು ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣ ವೈದ್ಯೆ ಮಗುವನ್ನು ಆ್ಯಂಬುಲೆನ್ಸ್ ಮೂಲಕ ನಗರದ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಐಸಿಯುನಲ್ಲಿ ಇರಿಸಿ ಮಗುವಿಗೆ ಚಿಕಿತ್ಸೆ ನೀಡಲಾಯಿತು. ಇತ್ತ ಶಹದಾ ನೋವಿನಿಂದ ನರಳಾಡುತ್ತಿದ್ದು, ವೈದ್ಯೆ ಆಕೆಗೆ 14 ಬಾಟಲಿ ರಕ್ತದ ಅಗತ್ಯವಿರುವುದಾಗಿ ಹೇಳಿದರು. ಮಾತ್ರವಲ್ಲದೆ ಆಕೆಯ ಗರ್ಭಕೋಶ ತೆಗೆಯದಿದ್ದರೆ ಜೀವಕ್ಕೆ ಅಪಾಯವಿರುವುದಾಗಿ ಹೇಳಿ, ಶಹದಾರ ಗರ್ಭಕೋಶವನ್ನೇ ತೆಗೆದರು. ಹಾಗಿದ್ದರೂ ರಕ್ತಸ್ರಾವ ನಿಲ್ಲದ ಕಾರಣ ಅದೇ ದಿನ ರಾತ್ರಿ 9 ಗಂಟೆಗೆ ಆಕೆಯನ್ನು ಕಂಕನಾಡಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಶಿಶುವನ್ನು ಎರಡು ದಿನಗಳ ನಂತರ ಕಂಕನಾಡಿ ಆಸ್ಪತ್ರೆಗೆ ದಾಖಲಿಸಿದ್ದು, ಅದೀಗ ಚೇತರಿಸಿಕೊಂಡಿದೆ. ಶಹದಾ ಪ್ರಸ್ತುತ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ರಕ್ತಸ್ರಾವದಿಂದ ನರಳುತ್ತಿದ್ದಾರೆ’’ ಎಂದು ಹೈದರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
‘‘ಪತ್ನಿ ಶಹದಾ ಗರ್ಭವತಿಯಾಗಿದ್ದ ವೇಳೆ ಸಹಜ ಹೆರಿಗೆಯೆಂದೇ ಹೇಳಿಕೊಂಡಿದ್ದರೂ, ಹಣದ ಆಸೆಯಿಂದ ವೈದ್ಯೆ ಸಿಸೇರಿಯನ್ ಮಾಡಿಸಿ ಆಕೆಯ ಜೀವಕ್ಕೆ ಅಪಾಯ ತಂದೊಡಿದ್ದಾರೆ. ವೈದ್ಯೆ ಮಾಡಿದ ತಪ್ಪನ್ನು ಮುಚ್ಚಿ ಹಾಕುವ ಹುನ್ನಾರದಿಂದ ತಾನೇ ಆ್ಯಂಬುಲೆನ್ಸ್ ತರಿಸಿ ಮಗು ಹಾಗೂ ನನ್ನ ಪತ್ನಿಯನ್ನು ಬೇರೆ ಬೇರೆ ಆಸ್ಪತ್ರೆಗೆ ಕಳುಹಿಸಿದ್ದರು. ಇದರಿಂದ ನಾನು ಹಾಗೂ ನನ್ನ ಕುಟುಂಬದವರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. ಇದೀಗ ಕಂಕನಾಡಿ ಆಸ್ಪತ್ರೆಯಲ್ಲಿ ಆಕೆಯ ಕಿಡ್ನಿ ಊದಿಕೊಂಡು ಸಮಸ್ಯೆ ಆಗಿರುವುದಾಗಿ ಹೇಳಿದ್ದಾರೆ. ಕೂಲಿ ಕಾರ್ಮಿಕನಾದ ನಾನು ಅನಗತ್ಯವಾಗಿ ಹಣ ವ್ಯಯಿಸುವಂತೆ ಮಾಡಿದ್ದಲ್ಲದೆ, ನನ್ನ ಪತ್ನಿ ಜೀವನ್ಮರಣದ ಮಧ್ಯೆ ಹೋರಾಡುವಂತಾಗಿದೆ. ಈ ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು’’ ಎಂದು ಹೈದರ್ ಒತ್ತಾಯಿಸಿದ್ದಾರೆ.
ನನ್ನಿಂದ ಯಾವುದೇ ನಿರ್ಲಕ್ಷವಾಗಿಲ್ಲ: ಡಾ. ವೀಣಾ ಭಟ್
‘‘ಶಹದಾ ಹೆರಿಗೆಗಾಗಿ ದಾಖಲಾದ ಸಂದರ್ಭ ಹೊಟ್ಟೆಯಲ್ಲಿನ ಮಗುವಿನ ಹೃದಯ ಬಡಿತದಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ತಾಯಿಗೆ ಶಸ್ತ್ರ ಚಿಕಿತ್ಸೆ ನಡೆಸುವುದು ಅನಿವಾರ್ಯವಾಗಿತ್ತು. ಬಳಿಕ ರಕ್ತಸ್ರಾವ ತೀವ್ರವಾದ ಹಿನ್ನೆಲೆಯಲ್ಲಿ ಗರ್ಭಕೋಶ ತೆಗೆಯಬೇಕಾಯಿತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಂಕನಾಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರ ಸ್ಥಿತಿ ಸಹಜವಾಗಿದೆ. ನಾನು ವೈದ್ಯೆಯಾಗಿದ್ದುಕೊಂಡು ನನ್ನ ರೋಗಿಯ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದೇನೆ. ನನ್ನಿಂದ ಯಾವುದೇ ರೀತಿಯ ತಪ್ಪು ಆಗಿಲ್ಲ’’
- ಡಾ. ವೀಣಾ ಭಟ್







