ನಮಗೆ ಜೀವಭಯವಿದೆ: ಮಣಿಪುರ ಮುಖ್ಯಮಂತ್ರಿಯ ಪುತ್ರನಿಂದ ಹತ ಯುವಕನ ಹೆತ್ತವರ ಅಳಲು

ಹೊಸದಿಲ್ಲಿ,ಮೇ 22: 2011ರಲ್ಲಿ ಬೀದಿಜಗಳದಲ್ಲಿ ಹಾಲಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಪುತ್ರ ಅಜಯ್ ಮೀತಾಯಿಯಿಂದ ಕೊಲೆಯಾಗಿದ್ದ ಯುವಕನ ಹೆತ್ತವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಮತ್ತು ಮಣಿಪುರ ಸರಕಾರಗಳಿಗೆ ನೋಟಿಸ್‌ಗಳನ್ನು ಹೊರಡಿಸಿದೆ.
ತಮಗೆ ಸುರಕ್ಷತೆಯ ಭೀತಿ ಕಾಡುತ್ತಿದೆ ಎಂದು ಮೃತ ಇರೋಮ್ ರೋಜರ್‌ನ ಹೆತ್ತವರು ಅರ್ಜಿಯಲ್ಲಿ ದೂರಿಕೊಂಡಿದ್ದಾರೆ.
ರೋಜರ್ ತಾಯಿ ಇರೋಮ್ ಚಿತ್ರಾದೇವಿ ಸಲ್ಲಿಸಿರುವ ಅರ್ಜಿಗೆ ಮೇ 29ರೊಳಗೆ ಉತ್ತರಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಮಣಿಪುರದ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಲಯವು ನಿರ್ದೇಶ ನೀಡಿದೆ.
2011,ಮಾ.20ರಂದು ಇರೋಮ್ ರೋಜರ್ ತನ್ನ ವಾಹನಕ್ಕೆ ಮಾರ್ಗ ನೀಡಿರಲಿಲ್ಲ ಎಂಬ ಕಾರಣಕ್ಕೆ ಆತನೊಂದಿಗೆ ಜಗಳವಾಡಿದ್ದ ಅಜಯ್ ಮೀತಾಯಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಇದಕ್ಕಾಗಿ ವಿಚಾರಣಾ ನ್ಯಾಯಾಲಯವು ಆತನಿಗೆ ಐದು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.
ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರದ ಆಡಳಿತದಡಿ ರೋಜರ್‌ನ ಹೆತ್ತವರು ತಮ್ಮ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದಾರೆ ಎಂದು ನ್ಯಾಯವಾದಿ ಉತ್ಸವ್ ಬೈನ್ಸ ಮೂಲಕ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ ತನ್ನನ್ನು ದೋಷಿಯೆಂದು ಘೋಷಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಜಯ್ ಮೀತಾಯಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಯುತ್ತಿರುವ ಉಚ್ಚ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ವಾದಿಸಲು ಯಾವುದೇ ವಕೀಲರು ಒಪ್ಪುತ್ತಿಲ್ಲ ಎಂದೂ ಅವರು ದೂರಿದ್ದಾರೆ.







