ಪರಿಹಾರಕ್ಕೆ ಬಂದಿದ್ದ ಮಹಿಳೆಯ ಮೇಲೆಯೇ ಜ್ಯೋತಿಷಿ ಅತ್ಯಾಚಾರ!

ಬೆಂಗಳೂರು, ಮೇ 22: ತನ್ನ ಪುತ್ರನಿಗೆ ಮೂರ್ಛೆ ರೋಗ ಸರಿಪಡಿಸಲು ಬಂದಿದ್ದ ತಾಯಿಯ ಮೇಲೆ ಏಳು ಬಾರಿ ಅತ್ಯಾಚಾರ ಎಸೆಗಿದ್ದ ಆರೋಪದ ಮೇಲೆ ಜ್ಯೋತಿಷಿಯೊಬ್ಬನನ್ನು ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಮಲಾನಗರದ ನಿವಾಸಿ ಪ್ರಸನ್ನ ಕುಮಾರ್ ಯಾನೆ ಕಾರ್ತಿಕ್ (31) ಬಂಧಿತ ಜ್ಯೋತಿಷಿ ಎಂದು ಪೊಲೀಸರು ಗುರುತಿಸಿದ್ದಾರೆ.
ಘಟನೆ ವಿವರ: ಆರ್‌ಪಿಸಿ ಲೇಔಟ್‌ನಲ್ಲಿ ವಾಸ ಮಾಡುತ್ತಿದ್ದ ಮಹಿಳೆಯೊಬ್ಬರ ಮಗನಿಗೆ ಮೂರ್ಛೆ ರೋಗವಿತ್ತು. ಅದನ್ನು ಗುಣಪಡಿಸುವುದಾಗಿ ಜ್ಯೋತಿಷಿ ಪ್ರಸನ್ನ ಕುಮಾರ್ ನಂಬಿಸಿದ್ದ. ಅಲ್ಲದೆ, ಇದಕ್ಕೂ ಮೊದಲು ಮಹಿಳೆಯ ಮನೆಗೆ ಹೋಗಿದ್ದ ಪ್ರಸನ್ನ ಕುಮಾರ್, ಅಂಗವಿಕಲರ ಸಂಸ್ಥೆಗೆ ದೇಣಿಗೆ ಸಂಗ್ರಹ ಮಾಡುತ್ತಿದ್ದೇನೆ. ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ. ಮಹಿಳೆ ಪ್ರಸನ್ನ ಕುಮಾರನಿಗೆ 200 ರೂ. ದೇಣಿಗೆ ನೀಡಿ ರಶೀದಿಯಲ್ಲಿ ಹೆಸರು ಮತ್ತು ಮೊಬೈಲ್ ನಂಬರ್ ಬರೆದಿದ್ದರು. ಈ ವೇಳೆ ಉಚಿತವಾಗಿ ಹಣ ಪಡೆಯಬಾರದು ಎಂದು ಹೇಳಿ ಮಹಿಳೆಗೆ ಊದುಬತ್ತಿ ನೀಡಿ ಸಭ್ಯನಂತೆ ನಟಿಸಿದ್ದ. ಬಳಿಕ ನಾನು ಜ್ಯೋತಿಷಿ ಮತ್ತು ನಾಟಿ ವೈದ್ಯನಾಗಿದ್ದೇನೆ. ನಿಮ್ಮ ಮಗ ಮೂರ್ಛೆ ರೋಗದಿಂದ ಬಳಲುತ್ತಿದ್ದಾನೆ ಎಂದಾಗ ಮಹಿಳೆ ಆಶ್ಚರ್ಯಗೊಂಡಿದ್ದರು. ಏಕೆಂದರೆ, ಮಹಿಳೆಯ ಮಗ ಕೆಲವು ದಿನಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ. ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಹೋಗಿದ್ದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಈ ಮಾತಿನಿಂದಾಗಿ ಮಹಿಳೆ ಜ್ಯೋತಿಷಿಯನ್ನು ನಂಬಿದ್ದಾರೆ.
ಸ್ವಲ್ಪಸಮಯದ ನಂತರ ಮಹಿಳೆಗೆ ಕಾಲ್ ಮಾಡಿದ ಪ್ರಸನ್ನ ಕುಮಾರ್ ನಾಟಿ ಔಷಧಿಯ ಮೂಲಕ ನಿನ್ನ ಮಗನ ರೋಗ ಸರಿ ಮಾಡಬಹುದು ಇಲ್ಲದಿದ್ದರೆ ಮಗನಿಗೆ ಗಂಡಾಂತರ ಕಾದಿದೆ ಎಂದು ಮಹಿಳೆಯನ್ನು ನಂಬಿಸಿ ಮನೆಗೆ ಬಂದ ಪ್ರಸನ್ನ ಕುಮಾರ, ನನ್ನ ಮೈ ಮೇಲೆ ದೇವಿ ಬಂದಿದ್ದಾಳೆ. ನಿನ್ನ ದೇಹ ಪರೀಕ್ಷೆ ಮಾಡಬೇಕು. ಹೇಳಿದಂತೆ ಕೇಳು ಎಂದು ಗದರಿಸಿದ್ದ.
ಈ ವೇಳೆ ಮಹಿಳೆಯ ಕೈಗೆ ಸಿಗರೇಟ್ ನೀಡಿ ಸೇದುವಂತೆ ಜ್ಯೋತಿಷಿ ಬಲವಂತ ಪಡಿಸಿದ್ದಾನೆ. ಬಳಿಕ ಮಹಿಳೆ ಸಿಗರೇಟ್ ಸೇದಿ ಕೆಮ್ಮಿನಿಂದ ಕುಸಿದು ಬಿದ್ದ ನಂತರ ಮಹಿಳೆಯನ್ನು ಎಬ್ಬಿಸಿ ನಿನ್ನ ದೇಹಕ್ಕೆ ಯಾರೋ ಮಾಟ ಮಾಡಿಸಿದ್ದಾರೆ. ನಿನ್ನ ಗಂಡನಿಗೂ ದೊಡ್ಡ ಸಮಸ್ಯೆ ಇದೆ ಎಂದು ಹೇಳಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಎಲ್ಲ ದೋಷಗಳು ಹೋಗುತ್ತವೆ ಎಂದು ಹೇಳಿದಾಗ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ, ಪ್ರಸನ್ನ ಕುಮಾರ ಮಹಿಳೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸೆಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
7 ಬಾರಿ ಅತ್ಯಾಚಾರ: ಜ್ಯೋತಿಷಿ ಏಳು ಬಾರಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ನಗ-ನಾಣ್ಯ ದಾನ ಮಾಡಬೇಕೆಂದು ಮನೆಯಲ್ಲಿ ಎರಡು ನೆಕ್ಲೇಸ್, 6 ಬಳೆ, 2 ಚಿನ್ನದ ಸರ, ಮೂರು ಉಂಗುರ ತೆಗೆದುಕೊಂಡು ಪೂಜೆಯ ಕೊನೆಯ ಹಂತದಲ್ಲಿ 21 ಲಕ್ಷ ರೂ. ನೀಡಬೇಕೆಂದು ಹೇಳಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪ್ರಸನ್ನ ಕುಮಾರ್ ಮಾತುಗಳನ್ನು ನಂಬಿದ ಮಹಿಳೆ ಗಂಡನಿಗೆ ಗೊತ್ತಾಗದಂತೆ ಚೆಕ್ ಮತ್ತು ನಗದು ರೂಪದಲ್ಲಿ 20.7 ಲಕ್ಷ ಹಣ ನೀಡಿದ್ದಾರೆ. ಹಣ ತೆಗೆದುಕೊಂಡ ಬಳಿಕ ಆರೋಪಿ ಪ್ರಸನ್ನ ಕುಮಾರ್ ಮೊಬೈಲ್ ಬಂದ್ ಮಾಡಿಕೊಂಡು ನಾಪತ್ತೆಯಾಗಿದ್ದ. ಕೊನೆಗೆ ದಿಕ್ಕು ತೋಚದ ಮಹಿಳೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರೋಪಿ ಜ್ಯೋತಿಷಿ ವಿರುದ್ಧ ಅತ್ಯಾಚಾರ (ಐಪಿಸಿ 376), ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು (504), ಜೀವ ಬೆದರಿಕೆ (506), ವಂಚನೆ (420), ಸುಲಿಗೆ (384) ಹಾಗೂ ಅಶ್ಲೀಲ ಪದಬಳಕೆ ಅಥವಾ ಸಂಜ್ಞೆ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ ತಂದ (509) ಆರೋಪಗಳಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.







