ಕಾಪು: ನವವಿವಾಹಿತೆ ಆತ್ಮಹತ್ಯೆ
ಕಾಪು, ಮೇ 22: ಒಂದು ತಿಂಗಳ ಹಿಂದ ಮದುವೆಯಾಗಿದ್ದ ನವ ವಿವಾಹಿತೆಯೋರ್ವಳು ಪತಿಯ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಕಾಪು ಸಮೀಪದ ಕರಂದಾಡಿ ಎಂಬಲ್ಲಿ ನಡೆದಿದೆ.
ಮಜೂರು ಗ್ರಾಮದ ಕರಂದಾಡಿ ನಿವಾಸಿ ಮನೋಹರ್ ಅವರ ಪತ್ನಿ ಉಷಾ (32) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ಎಂದು ಗುರುತಿಸಲಾಗಿದೆ.
ಕರಂದಾಡಿಯ ಮನೋಹರ್ ಮತ್ತು ಕರ್ಜೆಯ ಉಷಾ ಅವರಿಗೆ ಕಳೆದ ಎಪ್ರಿಲ್ ತಿಂಗಳಲ್ಲಿ ವಿವಾಹವಾಗಿತ್ತು. ಸೋಮವಾರ ಮಧ್ಯಾಹ್ನ 12:30ರ ವೇಳೆಗೆ ಉಷಾ ತನ್ನ ರೂಮ್‌ನ ಒಳಗೆ ಹೋಗಿದ್ದು, ಅವರ ಅತ್ತೆ ಮಧ್ಯಾಹ್ನದ ಊಟಕ್ಕಾಗಿ ಪದಾರ್ಥ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಸಂದರ್ಭ ಅಂಗಡಿಯಿಂದ ಬಂದ ಮನೋಹರ್ ರೂಮ್ ಬಾಗಿಲು ತೆಗೆಯುವಂತೆ ಪತ್ನಿಯಲ್ಲಿ ಹೇಳಿದ್ದು, ಬಾಗಿಲು ತೆಗೆಯದೇ ಇದ್ದು, ಒಳಗೆ ಚಿಲಕ ಹಾಕಿ ಬಾಗಿಲು ಹಾಕಿರುವುದು ಗಮನಕ್ಕೆ ಬಂದಿತ್ತು.
ಉಷಾಳಿಗೆ ನಿದ್ದೆ ಬಂದಿರಬೇಕೆಂದು ಸಂಶಯಿಸಿ ಪತಿ ಕಿಟಕಿಯಲ್ಲಿ ಇಣುಕಿ ಕರೆಯತ್ನಿಸಿದ್ದು, ಈ ಸಂದರ್ಭ ಆಕೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಗಮನಕ್ಕೆ ಬಂದಿದ್ದು, ತಕ್ಷಣ ಬಾಗಿಲು ಒಡೆದು ಒಳಗೆ ಬಂದು ನೋಡಿದಾಗ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸ್ ಉಪನಿರೀಕ್ಷಕ ಜಗದೀಶ್ ರೆಡ್ಡಿ ಅವರು ಕೂಡಾ ಉಷಾ ಅವರ ತಾಯಿ ಮನೆಗೆ ಮತ್ತು ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ತಹಶೀಲ್ದಾರ್ ಸ್ಥಳಕ್ಕೆ ಬಂದ ಬಳಿಕ ಮೃತದೇಹವನ್ನು ಸೂರಿ ಶೆಟ್ಟಿಯವರ ಮೂಲಕವಾಗಿ ಕೆಳಗೆ ಇಳಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಈ ಬಗ್ಗೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.