ಮಹಿಳಾ ಜಿಲ್ಲಾಧಿಕಾರಿಯನ್ನು ಅಸಭ್ಯವಾಗಿ ನಿಂದಿಸಿದ ಬಿಜೆಪಿ ಯುವ ನಾಯಕ: ಪ್ರಕರಣ ದಾಖಲು

ಛತ್ತೀಸ್ ಗಡ, ಮೇ 23: ನೂತನವಾಗಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಮಹಿಳಾ ಐಎಎಸ್ ಅಧಿಕಾರಿಯೋರ್ವರನ್ನು ಅಸಭ್ಯವಾಗಿ ನಿಂದಿಸಿದ ಬಿಜೆಪಿ ಯೂತ್ ವಿಂಗ್ ನಾಯಕನೋರ್ವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ರಾಯ್ ಗರ್ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಶಮ್ಮೀ ಆಬ್ದಿಯವರನ್ನು ಭಾರತೀಯ ಜನತಾ ಯುವ ಮೋರ್ಚಾದ ಉಪಾಧ್ಯಕ್ಷ ಪ್ರಕಾಶ್ ಅಗರ್ವಾಲ್ ವಾಟ್ಸ್ಯಾಪ್ ಗ್ರೂಪೊಂದರಲ್ಲಿ ಅಸಭ್ಯವಾಗಿ ನಿಂದಿಸಿದ್ದ. ಪತ್ರಕರ್ತರಾದ ವಾಟ್ಸ್ಯಾಪ್ ಗ್ರೂಪ್ ನ ಅಡ್ಮಿನ್ ತಕ್ಷಣ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಆಬ್ದಿ ಜಗ್ದಲ್ಪುರ್ ಎಸ್ಪಿ ಆರಿಫ್ ಶೇಖ್ ರ ಪತ್ನಿ.
ಅಗರ್ವಾಲ್ ವಿರುದ್ಧ ಜಗದಲ್ಪುರದಲ್ಲೂ ಪ್ರಕರಣ ದಾಖಲಾಗಿದೆ. “ಘಟನೆಯ ಬಗ್ಗೆ ಅಧಿಕಾರಿಗೆ ಮಾಹಿತಿ ಸಿಕ್ಕಾಗ ಅವರು ಜಗದಲ್ಪುರದಲ್ಲಿದ್ದರು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಧಿಕಾರಿ ಮುಸ್ಲಿಮ್ ಆಗಿದ್ದರಿಂದ ಅವರನ್ನು ನಿಂದಿಸಲಾಗಿದೆ ಎಂದು ಛತ್ತೀಸ್ ಗಢ ಕಾಂಗ್ರೆಸ್ ಆರೋಪಿಸಿದೆ. “ಸಮುದಾಯವೊಂದರ ವಿರುದ್ಧ ನಡೆಯುವ ಇಂತಹ ಚಟುವಟಿಕೆಗಳನ್ನು ಬಿಜೆಪಿ ಬೆಂಬಲಿಸುತ್ತಿದೆಯೇ?” ಎಂದು ರಾಜ್ಯ ಸರಕಾರದ ವಕ್ತಾರ ಆರ್.ಪಿ. ಸಿಂಗ್ ಪ್ರಶ್ನಿಸಿದ್ದಾರೆ.







