ಅನುದಾನಿತ ಅಂಗವಿಕಲ ಶಾಲೆಗಳ ನೌಕರರಿಗೆ ನಿವೃತ್ತಿ ವೇತನ, ಹೆಚ್‌ಆರ್‌ಎಂಎಸ್ ಜಾರಿಗೆ ಒತ್ತಾಯ
ಚಿಕ್ಕಮಗಳೂರು, ಮೇ.23: ರಾಜ್ಯದಲ್ಲಿ ಅನುದಾನಿತ ಅಂಗವಿಕಲರ ಶಾಲೆಗಳಲ್ಲಿ ದುಡಿಯುತ್ತಿರುವ ನೌಕರರಿಗೆ ನಿವೃತ್ತಿ ವೇತನ ಮತ್ತು ಎಚ್.ಆರ್.ಎಂ.ಎಸ್. ಜಾರಿಗೊಳಿಸಬೇಕು ಎಂದು ಕರ್ನಾಟಕ ಅಂಧರ ಒಕ್ಕೂಟದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಅವರು ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದು, 1982ರ ಅನುದಾನ ಸಂಹಿತೆಯಡಿ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 35 ಅಂಗವಿಕಲರ ಶಾಲೆಗಳ ನೌಕರರಿಗೆ ನಿವೃತ್ತಿ ವೇತನ ಮತ್ತು ಹೆಚ್‌ಆರ್‌ಎಂಎಸ್ ಸೌಲಭ್ಯಗಳನ್ನು ಜಾರಿಗೊಳಿಸಬೇಕೆಂದು ಸರ್ಕಾರಿ ಆದೇಶವಿದ್ದರೂ ಅದನ್ನು ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಇಲಾಖೆಯ ಅಧಿಕಾರಿಗಳು ಕಳೆದ 4 ವರ್ಷಗಳಿಂದಲೂ ಜಾರಿಗೊಳಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಆದೇಶ ಸಂಖ್ಯೆ : ಮಮಇ 17 ಪಿಹೆಚ್‌ಪಿ 2010 ಬೆಂಗಳೂರು 2003 ಮಾ.19ರ ಪ್ರಕಾರ ಇಂತಹ ಶಾಲೆಗಳಲ್ಲಿ ದುಡಿಯುತ್ತಿರುವ ನೌಕರರು ಸರ್ಕಾರದ ನಿಯಮಾವಳಿ ಪ್ರಕಾರ ನೇಮಕಾತಿಯಾಗಿದ್ದು ಸರ್ಕಾರಿ ಸೇವಾ ನಿಯಮಗಳ ಅನ್ವಯಎಲ್ಲಾ ವಿದ್ಯಾರ್ಹತೆ ಮತ್ತು ವಿಶೇಷ ತರಬೇತಿಗಳನ್ನು ಮುಗಿಸಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಇದುವರೆವಿಗೆ ಸದರಿ ಸರ್ಕಾರಿಆದೇಶವನ್ನು ಕಾರ್ಯಗತಗೊಳಿಸಿಲ್ಲ ಎಂದು ಹೇಳಿದ್ದಾರೆ.
ಈ ಸಂಸ್ಥೆಗಳಲ್ಲಿ 357 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿರುವವರಲ್ಲಿ ಬಹುತೇಕರು ಸ್ವತಃ ಅಂಗವಿಕಲ ವರ್ಗಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ ಹೀಗಾಗಲೆ ಹಲವರು ನಿವೃತ್ತಿ ಹೊಂದಿದ್ದು ಸರ್ಕಾರದ ಯಾವುದೇ ಹಣಕಾಸಿನ ಸೌಲಭ್ಯವಿಲ್ಲದೆ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದ್ದರಿಂದ ತಾವು ಆದಷ್ಟು ಶೀಘ್ರವಾಗಿ ಸದರಿ ನಿವೃತ್ತಿ ವೇತನ ಆದೇಶವನ್ನು ಕಾರ್ಯಗತಗೊಳಿಸಲು ಇಲಾಖೆಗೆ ಆದೇಶ ಮಾಡುವುದರ ಮೂಲಕ ಇಂತಹ ಅಂಗವಿಕಲ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರ ಬಾಳಿಗೆ ಬೆಳಕಾಗಬೇಕೆಂದು 357 ನೌಕರರ ಕುಟುಂಬ ನಿರ್ವಹಣೆ ಹಿತದೃಷ್ಟಿಯಿಂದ ಮನವಿ ಮಾಡುವುದಾಗಿ ಹೇಳಿದ್ದಾರೆ.
ಈ ಆದೇಶವನ್ನು ತುರ್ತಾಗಿ ಜಾರಿಗೊಳಿಸದಿದ್ದಲ್ಲಿ 357 ಜನ ನೌಕರರು ಕುಟುಂಬ ಸಮೇತ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.







