ಎ.ಐ.ಟಿ. ಕಾಲೇಜಿನಲ್ಲಿ ಚುಂಚನ 2017ಸಾಂಸ್ಕೃತಿಕ ಹಬ್ಬದ ಉದ್ಘಾಟನೆ

ಚಿಕ್ಕಮಗಳೂರು, ಮೇ .23: ನಮ್ಮ ದೇಶವು 60 70 ಭಾಗ ಕೃಷಿಯನ್ನು ಅವಲಂಭಿಸಿದ್ದು, ತಾಂತ್ರಿಕ ಜ್ಞಾನವನ್ನು ಕೃಷಿಗೆ ಅಳವಡಿಸಿದರೆ, ಅದರಿಂದ ಕೃಷಿಯ ಬೆಳವಣಿಗೆ ಸಾಧ್ಯವಾಗುತ್ತದೆ. ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವುದು, ತಾಳ್ಮೆಯಿಂದ ಇರುವುದು ಪ್ರತಿಯೊಬ್ಬರಿಗೂ ಅವಶ್ಯಕ ಎಂದು ಸಿಡಿಎ ಅಧ್ಯಕ್ಷ ಸೈಯ್ಯದ್ ಹನೀಫ್ ಹೇಳಿದರು.
ಅವರು ಮಂಗಳವಾರ ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘವು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಚುಂಚನ 2017 ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿ ಅಭ್ಯಾಸ ಮಾಡಿದ ನನ್ನ ಮಕ್ಕಳು ಮತ್ತು ನನ್ನ ಸಹೋದರರ ಮಕ್ಕಳು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಈ ಕಾಲೇಜಿನಲ್ಲಿ ಶಿಸ್ತು ಎದ್ದು ಕಾಣುತ್ತದೆ. ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಬೆಳವಣಿಗೆಗೆ ಅತ್ಯಮೂಲ್ಯವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ.ಸುಬ್ಬರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ವೃಂದದವರು ಬಹಳಷ್ಟು ಉತ್ಸಾಹ ಮತ್ತು ಸಂಭ್ರಮದಿಂದ ಚುಂಚನ ಹಬ್ಬವನ್ನು ಆಚರಿಸುತ್ತಿದ್ದಾರೆ. ಒಂದೇ ಸಮನಾಗಿ ದಿನ ನಿತ್ಯದ ಜಂಜಾಟದಲ್ಲಿ ಕಾರ್ಯ ನಿರ್ವಹಿಸುವಾಗ, ಒಂದಿಷ್ಟು ಕ್ರಿಯಾತ್ಮಕತೆಯ ಅವಶ್ಯಕತೆ ಮತ್ತು ರಚನಾತ್ಮಕವಾಗಿ ಯೋಚಿಸುವಂತಹ ಮನೋಭಾವ ಮನೋರಂಜನೆಯಿಂದ ಮಾತ್ರ ದೊರಕಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತಿಭೆ ಎನ್ನುವುದು ಇರುತ್ತದೆ ಎಂದರು.
ವಿದ್ಯಾರ್ಥಿನಿ ವೇದ ಮತ್ತು ಸಂಡಿಗರು ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾರ್ಥಿನಿ ಅನನ್ಯ ಸ್ವಾಗತಿಸಿ, ವಿದ್ಯಾರ್ಥಿ ಲೋಕೇಶ್ ವಂದಿಸಿದರು. ವಿದ್ಯಾರ್ಥಿನಿ ಸಮರ್ಥ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಸುರಕ್ಷ ಮತ್ತು ಸೌಗಂಧಿಕ ಕಾರ್ಯಕ್ರಮ ನಿರೂಪಣೆ ಮಾಡಿದರು.







