ಈ ಗ್ರಾಮದಲ್ಲಿನ 1,000 ಮಂದಿಯ ಜನ್ಮದಿನಾಂಕ ಜನವರಿ 1!

ಅಲಹಾಬಾದ್, ಮೇ 23: ಇಲ್ಲಿನ ಕಂಜಾಸ ಗ್ರಾಮದ ಜನರು ಒಂದು ವಿಶೇಷತೆಗಾಗಿ ಇತ್ತೀಚೆಗೆ ಸುದ್ದಿಯಾಗಿದ್ದಾರೆ. ಈ ಗ್ರಾಮದಲ್ಲಿನ ಸುಮಾರು 1000 ಮಂದಿ ಜನಿಸಿದ್ದು, ಒಂದೇ ದಿನ ಅಂದರೆ ಜನವರಿ 1ರಂದು. ಆದರೆ ಇದನ್ನು ಇಲ್ಲಿನ ಗ್ರಾಮಸ್ಥರು ಒಪ್ಪುವುದಿಲ್ಲ. ಏಕೆಂದರೆ ನಿಜವಾಗಿಯೂ ಇಂತಹ ಅಚ್ಚರಿ ನಡೆದಿಲ್ಲವಾದರೂ, ಆಧಾರ್ ಕೇಂದ್ರದ ಯಂತ್ರದ ಎಡವಟ್ಟು ಈ ಸಮಸ್ಯೆಯನ್ನು ಹುಟ್ಟುಹಾಕಿದೆ.
ಕಂಜಾಸದ ಪ್ರತಿ ಐವರಲ್ಲಿ ಓರ್ವನ ಜನ್ಮ ದಿನಾಂಕ ಜನವರಿ ಒಂದು ಎಂದು ಆಧಾರ್ ಕಾರ್ಡ್ ಗಳಲ್ಲಿ ನಮೂದಿಸಲ್ಪಟ್ಟಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ನಿಜವಾದ ಜನ್ಮ ದಿನಾಂಕವನ್ನು ನಮೂದಿಸಿಲ್ಲ ಎಂದು ಹಲವಾರು ದೂರುಗಳು ಬಂದ ಮೇಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿದ್ದಾರೆ.
“ಸುಮಾರು 1000 ( 5000 ಜನರಲ್ಲಿ) ಗ್ರಾಮಸ್ಥರು ತಮ್ಮ ಜನ್ಮ ದಿನಾಂಕ ಸರಿಯಿಲ್ಲವೆಂದು ದೂರು ನೀಡಿದ್ದರು. ಆದರೆ ಆಶ್ಚರ್ಯಕಾರಿ ಸಂಗತಿಯೆಂದರೆ ಎಲ್ಲರ ಜನ್ಮದಿನಾಂಕವೂ ಜನವರಿ 1 ಎನ್ನುವುದಾಗಿತ್ತು” ಎಂದು ಬ್ಲಾಕ್ ಡೆವಲಪ್ ಮೆಂಟ್ ಆಫಿಸರ್ ನೀರಜ್ ದುಬೆ ಹೇಳಿದ್ದಾರೆ.
“ಪ್ರಕರಣದ ತನಿಖೆ ನಡೆದು ವ್ಯವಸ್ಥೆ ಸರಿಪಡಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜನ್ಮ ದಿನಾಂಕ ತಪ್ಪಾಗಿ ನಮೂದಿಸಲ್ಪಟ್ಟ ಆಧಾರ್ ಕಾರ್ಡ್ ಗಳನ್ನು ಪಡೆದು ಮರುವಿತರಣೆ ಮಾಡಲಾಗುವುದು ಎಂದವರು ಹೇಳಿದ್ದಾರೆ.







