ಸ್ಮೃತಿ ಇರಾನಿ ನಕಲಿ ಪದವಿ ಪ್ರಕರಣಕ್ಕೆ ಮರುಜೀವ
ದಾಖಲೆ ಹಸ್ತಾಂತರಿಸಲು ದಿಲ್ಲಿ ಹೈಕೋರ್ಟ್ ಸೂಚನೆ

ಹೊಸದಿಲ್ಲಿ, ಮೇ 23: ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮತಿ ಇರಾನಿ ವಿರುದ್ದ ದಾಖಲಾಗಿರುವ ಪ್ರಕರಣ ಮತ್ತೆ ಸಕ್ರಿಯಗೊಂಡಿದ್ದು , ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ಹಸ್ತಾಂತರ ಮಾಡುವಂತೆ ದಿಲ್ಲಿ ಹೈಕೋರ್ಟ್ ಸೂಚಿಸಿದೆ.
ಈ ವಿಷಯದ ಬಗ್ಗೆ ಅಹ್ಮದ್ ಖಾನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿಯ ಕೆಳ ನ್ಯಾಯಾಲಯವೊಂದು ಕಳೆದ ವರ್ಷ ರದ್ದುಗೊಳಿಸಿತ್ತು. ಸ್ಮತಿ ಇರಾನಿಗೆ ಅನವಶ್ಯಕವಾಗಿ ಕಿರುಕುಳ ನೀಡುವ ಉದ್ದೇಶದಿಂದ ಈ ಅರ್ಜಿಯನ್ನು ದಾಖಲಿಸಲಾಗಿದೆ ಎಂದು ಅರ್ಜಿ ರದ್ದುಗೊಳಿಸಲು ಕಾರಣ ನೀಡಲಾಗಿತ್ತು. 11 ವರ್ಷದ ಬಳಿಕ ಅರ್ಜಿ ಸಲ್ಲಿಸಲಾಗಿದೆ. ಬಹುಷಃ ಸ್ಮತಿ ಸಚಿವರಾದ ಹಿನ್ನೆಲೆಯಲ್ಲಿ ಅರ್ಜಿ ದಾಖಲಿಸಲಾಗಿದೆ. ಈ ಸುದೀರ್ಘ ಅವಧಿಯಲ್ಲಿ ಪ್ರಕರಣದ ಕುರಿತ ಮೂಲ ದಾಖಲೆಗಳು ಕಳೆದುಹೋಗಿವೆ. ತರುವಾಯದ ದಾಖಲೆಗಳು ಹೆಚ್ಚು ಪ್ರಯೋಜನ ಬೀರದು ಎಂದು ನ್ಯಾಯಾಲಯ ತಿಳಿಸಿತ್ತು.
ಇದನ್ನು ಪ್ರಶ್ನಿಸಿ ಖಾನ್ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದೀಗ ಪ್ರಕರಣದ ದಾಖಲೆ ಪತ್ರಗಳನ್ನು ಹಸ್ತಾಂತರಿಸುವಂತೆ ಹೈಕೋರ್ಟ್ ತಿಳಿಸಿದ್ದು ದಾಖಲೆ ಪತ್ರಗಳನ್ನು ಪರಿಶೀಲಿಸಿದ ಬಳಿಕ ಸ್ಮತಿ ಇರಾನಿ ಅಥವಾ ಇನ್ನಿತರರಿಗೆ ಸಮನ್ಸ್ ಜಾರಿಗೊಳಿಸುವ ಬಗ್ಗೆ ನಿರ್ಧರಿಸಲಿದೆ ಎಂದು ವಕೀಲರು ತಿಳಿಸಿದ್ದಾರೆ. 2004ರ ಚುನಾವಣೆ ಸಂದರ್ಭ ಸ್ಮತಿ ಇರಾನಿ ತಾನು ದಿಲ್ಲಿ ವಿವಿಯಿಂದ ಬಿ.ಎ.ಪದವಿ ಪಡೆದಿರುವುದಾಗಿ ತಿಳಿಸಿದ್ದರೆ, ನಂತರದ ಚುನಾವಣೆಯ ಸಂದರ್ಭ ತಾನು ಅಂಚೆ ಶಿಕ್ಷಣದ ಮೂಲಕ ಬಿ.ಕಾಂ ಪದವಿ ಪಡೆದಿರುವುದಾಗಿ ಚುನಾವಣಾ ಆಯೋಗಕ್ಕೆ ತಿಳಿಸಿದ್ದರು. ಹೀಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿರುವುದು ಅಪರಾಧವಾಗಿದೆ ಎಂದು ಅಹ್ಮದ್ ಖಾನ್ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.







