ಯುವಕನನ್ನು ಸೇನೆಯ ಜೀಪಿಗೆ ಕಟ್ಟಿದ ಪ್ರಕರಣ ; ತನಿಖೆ ಮುಂದುವರಿಯಲಿದೆ : ಪೊಲೀಸರ ಹೇಳಿಕೆ

ಶ್ರೀನಗರ, ಮೇ 23: ಯುವಕನೋರ್ವನನ್ನು ಸೇನಾಪಡೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯಂತೆ ಬಳಸಿಕೊಳ್ಳಲಾದ ಘಟನೆಯ ತನಿಖೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಬುದ್‌ಗಾಂವ್ ಜಿಲ್ಲೆಯ ಫರೂಖ್ ಅಹ್ಮದ್ ದಾರ್ ಎಂಬ ವ್ಯಕ್ತಿಯನ್ನು ಸೇನಾಪಡೆಯ ಜೀಪಿನ ಮುಂಭಾಗಕ್ಕೆ ಕಟ್ಟಿ ಎಳೆದೊಯ್ಯಲಾಗಿತ್ತು. ತಮ್ಮ ಮೇಲೆ ನಿರಂತರವಾಗಿ ಕಲ್ಲೆಸೆಯುತ್ತಿದ್ದ ಗುಂಪನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಮತ್ತು ದಾರ್‌ನನ್ನು ಜೀಪಿನ ಮುಂಭಾಗಕ್ಕೆ ಕಟ್ಟಿದ ಬಳಿಕ ಕಲ್ಲೆಸೆತ ಸ್ಥಗಿತಗೊಂಡಿತ್ತು . ಸೇನಾಪಡೆಗಳು ಯಾವುದೇ ಅಡ್ಡಿಯಿಲ್ಲದೆ ಸಂಚರಿಸಿದವು ಎಂದು ಸೇನೆಯು ಈ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಈ ಕ್ರಮ ಕೈಗೊಂಡಿದ್ದ ಮೇಜರ್ ಲೀಟಲ್ ಗೊಗೋಯ್‌ಗೆ , ಬಂಡುಗೋರರನ್ನು ಹತ್ತಿಕ್ಕಲು ನಡೆಸಿದ ಪ್ರಯತ್ನಕ್ಕಾಗಿ ಸಿಒಎಎಸ್ ಪ್ರಶಂಸಾ ಪತ್ರ ನೀಡಲಾಗಿತ್ತು.
ಘಟನೆಯ ವಿಡಿಯೋ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಸೇನೆಯ ವಿರುದ್ಧ ಎಪ್ರಿಲ್ 15ರಂದು ಎಫ್‌ಐಆರ್ ದಾಖಲಾಗಿತ್ತು. ವ್ಯಕ್ತಿಯ ಅಪಹರಣ ಮತ್ತು ಆತನ ಜೀವವನ್ನು ಅಪಾಯಕ್ಕೆ ಒಡ್ಡಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿತ್ತು. ಸೇನೆಯೂ ಈ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿತ್ತು.
ಒಮ್ಮೆ ಎಫ್‌ಐಆರ್ ದಾಖಲಾದ ಬಳಿಕ ಅದನ್ನು ರದ್ದು ಪಡಿಸಲಾಗದು. ತನಿಖೆ ಪೂರ್ಣಗೊಳ್ಳಲೇಬೇಕು. ತನಿಖೆ ನಡೆಯಲಿದೆ ಮತ್ತು ಫಲಿತಾಂಶವನ್ನು ತಿಳಿಸಲಾಗುವುದು ಎಂದು ಕಾಶ್ಮೀರದ ಐಜಿಪಿ ಮುನೀರ್ ಖಾನ್ ತಿಳಿಸಿದ್ದಾರೆ.







