ತಂಬಾಕು ನಿಷೇಧ ಉಲ್ಲಂಘನೆಗೆ ದಂಡ ವಸೂಲಿ

ಉಡುಪಿ, ಮೇ 23: ಉಡುಪಿ ಜಿಲ್ಲೆಯನ್ನು ಕೋಟ್ಪಾ 2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕ ಮೇ ತಿಂಗಳಿನಲ್ಲಿ ಇಲ್ಲಿಯವರೆಗೆ 4 ದಾಳಿಗಳನ್ನು ನಡೆಸಿದ್ದು, ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ 60 ಪ್ರಕರಣಗಳನ್ನು ದಾಖಲಿಸಿ 8,200 ರೂ. ದಂಡ ವಸೂಲಿ ಮಾಡಿದೆ.
ಈ ದಾಳಿಯಲ್ಲಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತು ನಾಮ ಫಲಕಗಳನ್ನು ಅಂಗಡಿ ಮಾಲಕ ರಿಂದ ತೆರವುಗೊಳಿಸಲಾಗಿದೆ. ಹಾಗೂ ಹೊಸದಾದ ಸೆಕ್ಷನ್ 4, 6(ಎ) ಮತ್ತು 6(ಬಿ) ನಾಮಫಲಕಗಳನ್ನು ಅವರಿಗೆ ವಿತರಿಸಲಾಯಿತು.
ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ವಾಸುದೇವ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಂತೇಶ್ ಉಳ್ಳಾಗಡ್ಡಿ, ಹಿರಿಯ ಆರೋಗ್ಯ ಮೇಲ್ವಿಚಾರಕ ಆನಂದ ಗೌಡ ಮತ್ತು ಕೃಷ್ಣಪ್ಪ ಆಹಾರ ದ್ರತೆ ಅಧಿಕಾರಿ ವೆಂಕಟೇಶ್, ಹಿರಿಯ ಆರೋಗ್ಯ ಸಹಾಯಕ ಪಟಗಾರ್, ಕಾರ್ಮಿಕ ಇಲಾಖೆಯ ಜೀವನ್ ಕುಮಾರ್, ಶಿಕ್ಷಣ ಇಲಾಖೆ ಭುಜಂಗ ಶೆಟ್ಟಿ, ಮಣಿಪಾಲ ನಗರ ವ್ಯಾಪ್ತಿಯ ಪೋಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.