ರೈತನನ್ನು ಸಭೆಯಿಂದ ಹೊರಗೆ ತಳ್ಳಿದ ಮಾಜಿ ಸಚಿವ ಕಳಕಪ್ಪ ಬಂಡಿ
ಮಹಾದಾಯಿ ಪ್ರಸ್ತಾಪಿಸಲು ಬಿಎಸ್‌ವೈಗೆ ಒತ್ತಾಯ
ಗದಗ, ಮೇ 23: ಕಳಸಾ-ಬಂಡೂರಿ, ಮಹಾದಾಯಿ ಯೋಜನೆ ಬಗ್ಗೆ ಪ್ರಸ್ತಾಪಿಸಬೇಕೆಂದು ರೈತರೊಬ್ಬರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರನ್ನು ಬಿಜೆಪಿ ಸಮಾಲೋಚನಾ ಸಭೆಯಲ್ಲಿ ಒತ್ತಾಯಿಸುತ್ತಿದ್ದಂತೆಯೇ ಮಾಜಿ ಸಚಿವ ಕಳಕಪ್ಪ ಬಂಡಿ ರೈತನನ್ನು ಸಭೆಯಿಂದ ಹೊರಗೆ ತಳ್ಳಿರುವ ಘಟನೆ ನಡೆದಿದೆ.
ಮಂಗಳವಾರ ಗದಗಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾಲೋಚನಾ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಬಿ.ಎಸ್.ಯಡಿಯೂರಪ್ಪ ಮಾತನಾಡುತ್ತಿದ್ದಾಗ ಸಭೆಯಲ್ಲಿ ಕುಳಿತಿದ್ದ ರೈತರೊಬ್ಬರು ಕಳಸಾ-ಬಂಡೂರಿ, ಮಹಾದಾಯಿ ಯೋಜನೆ ಬಗ್ಗೆ ಪ್ರಸ್ತಾಪಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದನ್ನು ಸಹಿಸದ ಮಾಜಿ ಸಚಿವ ಕಳಕಪ್ಪ ಬಂಡಿ ವೇದಿಕೆಯಿಂದ ಕೆಳಗಿಳಿದು ಬಂದು ರೈತನನ್ನು ಸಭೆಯಿಂದ ಹೊರಗೆ ತಳ್ಳಿದ್ದಾರೆ ಎಂದು ತಿಳಿದುಬಂದಿದೆ.
ಈ ರೈತನ ಧ್ವನಿಗೆ ಧ್ವನಿಗೂಡಿಸಲು ಹೋದ ಮತ್ತೊಬ್ಬ ರೈತನ ಮೇಲೂ ಕೈ ಎತ್ತಲು ಹೋಗಿದ್ದಾರೆ ಎಂದು ಮಾಹಿತಿ ದೊರಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಭೆಯಲ್ಲಿ ಇದ್ದರೂ ಕಳಕಪ್ಪ ಬಂಡಿ ರೈತರ ಮೇಲೆ ದರ್ಪ ತೋರಿಸಿರುವುದನ್ನು ಹಲವು ರೈತ ಮುಖಂಡರು ಬಲವಾಗಿ ಖಂಡಿಸಿದ್ದಾರೆ.





