ನಾಡದ್ರೋಹಿ ಘೋಷಣೆ ಕೂಗುವವರು ಮಹಾರಾಷ್ಟ್ರಕ್ಕೆ ಹೋಗಲಿ: ರೋಷನ್‌ಬೇಗ್

ಬೆಳಗಾವಿ, ಮೇ 23: ಕರ್ನಾಟಕದಲ್ಲಿದ್ದು ನಾಡದ್ರೋಹಿ ಘೋಷಣೆ ಕೂಗುವವರು ಮಹಾರಾಷ್ಟ್ರಕ್ಕೆ ಹೋಗಲಿ ಎಂದು ಬೆಳಗಾವಿ ಮಹಾಗರ ಪಾಲಿಕೆಯ ಎಂಇಎಸ್ ಸದಸ್ಯರ ವಿರುದ್ಧ ನಗರಾಭಿವೃದ್ಧಿ ಸಚಿವ ಆರ್.ರೋಷನ್‌ಬೇಗ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿದ್ದುಕೊಂಡು ಬೇರೆ ರಾಜ್ಯಕ್ಕೆ ಜೈಕಾರ ಕೂಗುವುದು ಸರಿಯಲ್ಲ. ನಾವೆಲ್ಲ ಭಾರತೀಯರು, ಕನ್ನಡಿಗರು ಎಂಬುದನ್ನು ಬೆಳಗಾವಿ ಮಹಾನಗರ ಪಾಲಿಕೆಯ ಎಂಇಎಸ್ ಸದಸ್ಯರು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.
ನಾಡದ್ರೋಹಿ ಘೋಷಣೆ ಕೂಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇನೆ. ಇಂತಹ ಘೋಷಣೆ ಕೂಗುವ ಪಾಲಿಕೆ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಕಾನೂನು ತರಲಾಗುವುದು. ಮುಂದಿನ ಅಧಿವೇಶನದಲ್ಲೆ ವಿಧೇಯಕ ಮಂಡನೆ ಮಾಡುತ್ತೇವೆ ಎಂದು ರೋಷನ್ ಬೇಗ್ ಹೇಳಿದರು.
ಬೆಳಗಾವಿ ಮಾಜಿ ಮೇಯರ್ ಸರೀತಾ ಪಾಟೀಲ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಪಾಟೀಲ್ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕುರಿತು ಮಾಧ್ಯಮಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ತಮ್ಮ ಹೇಳಿಕೆಯನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ರಾಜ್ಯದ ಬಸ್‌ಗಳನ್ನು ತಡೆದು ಅದರ ಮೇಲೆ ರಾಜ್ಯ ವಿರೋಧಿ ಬರಹಗಳನ್ನು ಅಂಟಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಬಸ್ಸುಗಳಿಗೆ ಯಾವುದೆ ಹಾನಿಯುಂಟಾಗದಂತೆ ಕ್ರಮ ಕೈಗೊಳ್ಳುವಂತೆ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು ಎಂದರು.
ಬೆಳಗಾವಿಯ ಕಣಬರ್ಗಿಯಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡುವ ಉದ್ದೇಶವಿದ್ದು, ಇದರಲ್ಲಿ ಸುಮಾರು 450 ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಅಲ್ಲದೆ, ಬೆಳಗಾವಿ ನಗರದಾದ್ಯಂತ 47 ಸಾವಿರ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರೋಷನ್ ಬೇಗ್ ಹೇಳಿದರು.
ಚರಂಡಿ ನೀರು ಸಂಸ್ಕರಣ ಘಟಕ ನಿರ್ಮಾಣಕ್ಕೆ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈತರಿಂದ ಮಾಹಿತಿಯನ್ನು ಕಲೆ ಹಾಕಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶಾಸಕ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.







