ಒಂಟಿ ಮಹಿಳೆಯ ಕೊಲೆ, ಸುಲಿಗೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಉಡುಪಿ, ಮೇ 24: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಎಂಬಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ಲೂಟಿಗೈದ ಪ್ರಕರಣದ ಅಪರಾಧಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
ಬ್ರಹ್ಮಾವರ ಹೇರೂರು ನಿವಾಸಿ ಯೋಗೀಶ್ (34) ಎಂಬಾತ ಶಿಕ್ಷೆಗೆ ಒಳಗಾದ ಅಪರಾಧಿ ಎಂದು ಗುರುತಿಸಲಾಗಿದೆ.
ಈತ 2009 ರಲ್ಲಿ ಹೇರೂರು ಗ್ರಾಮದಲ್ಲಿ ಜನರಲ್ ಸ್ಟೋರ್ ಅಂಗಡಿಯನ್ನು ತೆರೆದಿದ್ದು, ಅಂಗಡಿಯನ್ನು ಮುನ್ನಡೆಸಲು ಹಲವು ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದನು. ವ್ಯಾಪಾರದಲ್ಲಿ ನಷ್ಟವಾಗಿರುವುದರಿಂದ ಸಾಲದ ಹಣ ಮರುಪಾವತಿಸದೆ ಈತನಿಗೆ ಕೋರ್ಟ್ ನೋಟೀಸ್ ಜಾರಿ ಮಾಡಿತ್ತು.
ಹಣದ ಅಡಚಣೆಯಲ್ಲಿದ್ದ ಯೋಗೀಶ್, ತನ್ನ ಮನೆಯ ಸಮೀಪದ ಸುನಂದ ಶೆಟ್ಟಿ ಎಂಬವರು ತುಂಬಾ ಚಿನ್ನಾಭರಣ ಧರಿಸಿಕೊಂಡು ತಿರುಗುವುದನ್ನು ಹಾಗೂ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಅವರ ಕೊಲೆ ಹಾಗೂ ಚಿನ್ನಾಭರಣ ಸುಲಿಗೆಗೆ ಯೋಜನೆ ರೂಪಿಸಿದ್ದನು.
2010ರ ಡಿ. 20ರಂದು ಸಂಜೆ 7:30ರ ಸುಮಾರಿಗೆ ಸುನಂದ ಎ.ಶೆಟ್ಟಿಯ ಮನೆ ಬಳಿ ತನ್ನ ಬೈಕಿನಲ್ಲಿ ಬಂದ ಯೋಗೀಶ್, ಮನೆಯ ಕಾಂಪೌಂಡ್ ಹಾರಿ ಮನೆ ಸ್ವಚ್ಛಗೊಳಿಸುತ್ತಿದ್ದ ಸುನಂದ ಅವರ ಹಿಂದಿನಿಂದ ಹೋಗಿ ಕುತ್ತಿಗೆಯನ್ನು ಕೈಯಿಂದ ಒತ್ತಿ ಕೊಲೆ ಮಾಡಿದನು.
ಬಳಿಕ ಅವರ ಮೈಮೇಲಿದ್ದ 1,80,000 ರೂ. ಮೌಲ್ಯದ ಒಟ್ಟೂ 120.60 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದನು. ಈ ಬಗ್ಗೆ ಮೃತರ ಅಳಿಯ ಬಿಜೆಪಿ ಮುಖಂಡ ಜ್ಞಾನ ವಸಂತ ಶೆಟ್ಟಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕ ಜಿ.ಕೃಷ್ಣಮೂರ್ತಿ ಪ್ರಕರಣದ ತನಿಖೆ ನಡೆಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿಗಳನ್ನು ವಿಚಾರಣೆ ನಡೆಸಿ ಹಾಗೂ ವಾದ ವಿವಾದವನ್ನು ಆಲಿಸಿ, ಯೋಗೀಶ್ ಅಪರಾಧವೆಸಗಿರುವುದು ಸಾಬೀತಾಗಿದೆಯೆಂದು ಪರಿಗಣಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ವೆಂಕಟೇಶ ನಾಯ್ಕ ಜೀವಾವಧಿ ಶಿಕ್ಷೆ, ಅಪರಾಧಕ್ಕೆ 7 ವರ್ಷ ಕಠಿಣ ಶಿಕ್ಷೆ ಮತ್ತು ಒಟ್ಟು 25,000 ರೂ. ದಂಡ ವಿಧಿಸಿ ಆದೇಶ ನೀಡಿದರು.
ಪ್ರಾಸಿಕ್ಯುಷನ್ ಪರವಾಗಿ ಅಂದಿನ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್. ಜಿತೂರಿ ಪ್ರಕರಣದ ಪ್ರಾಥಮಿಕ ಸಾಕ್ಷಿ ವಿಚಾರಣೆ ಮಾಡಿದ್ದು ಮತ್ತು ಪ್ರಸ್ತುತ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಂತಿ ಬಾಯಿ ಸಾಕ್ಷಿ ವಿಚಾರಣೆ ಮತ್ತು ವಾದವನ್ನು ಮಂಡಿಸಿದ್ದಾರೆ.







