ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ: ಯು.ಟಿ.ಖಾದರ್

ಬೆಂಗಳೂರು, ಮೇ 24: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುರಾಗ್ ತಿವಾರಿ ಸಾವಿಗೆ ಸಂಬಂಧಿಸಿದಂತೆ ನಡೆಯಲಿರುವ ಸಿಬಿಐ ತನಿಖೆಗೆ ನಾವು ಅಗತ್ಯ ಸಹಕಾರ ನೀಡಲು ಸಿದ್ಧರಿದ್ದೇವೆ. ಬಿಜೆಪಿಯವರು ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಿಡಿಗಾರಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 2 ಸಾವಿರ ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಕೇವಲ ಬಾಯಿ ಮಾತಲ್ಲಿ ಹೇಳುತ್ತಿದ್ದಾರೆ. ಇದೇ ಮಾತನ್ನು ಅವರು ಲಿಖಿತ ರೂಪದಲ್ಲಿ ಬರೆದು ದೂರು ನೀಡಲಿ, ಬಿಜೆಪಿಯವರು ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಯಲ್ಲಿ ಯಾವುದೆ ಹಗರಣ ನಡೆದಿರುವ ಕುರಿತು ಲಿಖಿತವಾಗಿ ಅಥವಾ ವೌಖಿಕವಾಗಿ ನಮ್ಮ ಗಮನಕ್ಕೆ ಬಂದಿಲ್ಲ. ಎರಡು ಸಾವಿರ ಕೋಟಿ ರೂ.ಗಳ ಹಗರಣದ ವಿಚಾರ ಕೇಳಿ ನಮಗೂ ಆಶ್ಚರ್ಯವಾಗಿದೆ. ಒಂದು ವೇಳೆ ಅಂತಹ ಯಾವುದಾದರೂ ಹಗರಣ ನಡೆದಿದ್ದರೆ ಅನುರಾಗ್ ತಿವಾರಿ, ಲೋಕಾಯುಕ್ತ, ಮುಖ್ಯಮಂತ್ರಿ ಅಥವಾ ಬೇರೆ ಯಾರಿಗಾದರೂ ದೂರು ನೀಡಬಹುದಿತ್ತಲ್ಲ ಎಂದು ಖಾದರ್ ಪ್ರಶ್ನಿಸಿದರು.
ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ತನಿಖೆ ನಡೆದು ಸತ್ಯಾಂಶ ಹೊರ ಬರಲಿ, ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ 2 ಸಾವಿರ ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಆರೋಪ ಮಾಡಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರಾದರೂ ಲಿಖಿತವಾಗಿ ದೂರು ನೀಡಿದರೆ, ನಮ್ಮ ಇಲಾಖೆಯಿಂದಲೂ ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದು ಖಾದರ್ ತಿಳಿಸಿದರು.







