ಉ.ಪ್ರದೇಶ: ನಾಲ್ವರು ಹಿರಿಯ ಅಧಿಕಾರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ನೊಯ್ಡ,ಮೇ 24: ಅಕ್ರಮ ಸಂಪತ್ತು ಶೇಖರಣೆಯ ದೂರುಗಳ ಹಿನ್ನೆಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಸೇರಿದಂತೆ ಉತ್ತರ ಪ್ರದೇಶದ ನಾಲ್ವರು ಹಿರಿಯ ಅಧಿಕಾರಿಗಳಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆಯು ದಾಳಿಗಳನ್ನು ನಡೆಸಿದೆ.
ಗ್ರೇಟರ್ ನೊಯ್ಡ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಹೆಚ್ಚುವರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಎಸಿಇಒ) ವಿಮಲಕುಮಾರ್ ಶರ್ಮಾ ಮತ್ತು ಅವರ ಪತ್ನಿ, ಮೀರತ್‌ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿರುವ ಮಮತಾ ಶರ್ಮಾ ಅವರಿಗೆ ಸಂಬಂಧಿಸಿದ ನೊಯ್ಡಾ, ಮೈನಪುರಿ, ಲಕ್ನೋ, ಮೀರತ್ ಮತ್ತು ಇತರ ನಗರಗಳಲ್ಲಿನ ವಿವಿಧ ಆಸ್ತಿಗಳ ಮೇಲಿನ ದಾಳಿ ಕಾರ್ಯಾಚರಣೆಗಳಲ್ಲಿ ಆದಾಯ ತೆರಿಗೆ ಮತ್ತು ಉತ್ತರ ಪ್ರದೇಶ ಪೊಲೀಸ್ ಇಲಾಖೆಗಳ ಸುಮಾರು 100 ಸಿಬ್ಬಂದಿಗಳು ಭಾಗಿಯಾಗಿದ್ದರು.
ಹಿಂದಿನ ಅಖಿಲೇಶ್ ಯಾದವ ಸರಕಾರವು ಗ್ರೇಟರ್ ನೊಯ್ಡ ಪ್ರಾಧಿಕಾರದ ಎಸಿಇಒ ಆಗಿ ನೇಮಕಗೊಳಿಸುವ ಮುನ್ನ ಶರ್ಮಾ ಘಾಝಿಯಾಬಾದ್ ಜಿಲ್ಲಾಧಿಕಾರಿ ಯಾಗಿದ್ದರು. ಅವರು ಫಿರೋಝಾಬಾದ್ ಜಿಲ್ಲಾಧಿಕಾರಿಯೂ ಆಗಿ ಕರ್ತವ್ಯ ನಿರ್ವಹಿಸಿ ದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಐಎಎಸ್ ಅಧಿಕಾರಿಯಾಗಿರುವ ಆರೋಗ್ಯ ಇಲಾಖೆಯ ನಿರ್ದೇಶಕ ಹೃದಯಶಂಕರ ತಿವಾರಿ ಮತ್ತು ಜೈಲು ಇಲಾಖೆಯ ವಿಶೇಷ ಕಾರ್ಯದರ್ಶಿ ಎಸ್.ಕೆ. ಸಿಂಗ್ ಅವರ ನಿವಾಸಗಳಲ್ಲಿಯೂ ಶೋಧ ಕಾರ್ಯಾಚರಣೆ ಗಳನ್ನು ನಡೆಸಿದ್ದಾರೆ.
ಉತ್ತರ ಪ್ರದೇಶದ ಇತರ ಐಎಎಸ್ ಮತ್ತು ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿಗಳಿಗೆ ಸಂಬಂಧಿತ ಬೇನಾಮಿ ಆಸ್ತಿಗಳ ಮೇಲೂ ಇಲಾಖೆಯು ದಾಳಿಗಳನ್ನು ನಡೆಸುವ ಸಾಧ್ಯತೆಗಳಿವೆ. ಕಳೆದೊಂದು ತಿಂಗಳಲ್ಲಿ ನೊಯ್ಡಿ, ಗ್ರೇಟರ್ ನೊಯ್ಡಿ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಅಧಿಕಾರಿಗಳ ವಿರುದ್ಧ ದೂರುಗಳಲ್ಲಿ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಳೆದ ತಿಂಗಳೂ ಆದಾಯ ತೆರಿಗೆ ಇಲಾಖೆಯು ರಾಜ್ಯದ ಹಲವಾರು ಹಿರಿಯ ಅಧಿಕಾರಿಗಳ ಮೇಲೆ ದಾಳಿಗಳನ್ನು ನಡೆಸಿತ್ತು.







