ಸ್ವಗ್ರಾಮದಲ್ಲಿ ಸರಕಾರಿ ಗೌರವಗಳೊಂದಿಗೆ ಪೇದೆ ನದಾಫ್ ಅಂತ್ಯಸಂಸ್ಕಾರ
ವಿಜಯಪುರ, ಮೇ 24: ಮಂಡ್ಯದಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭ ನೇರಳೆ ಮರ ಏರಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ ಪೇದೆ ಬಾಷಾ ಸಾಬ ಸೋಫಿಸಾಬ ನದಾಫ್ (23) ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಲಾಯಿತು.
ಮಂಡ್ಯದಿಂದ ಪಾರ್ಥಿವ ಶರೀರದೊಂದಿಗೆ ಆಗಮಿಸಿದ್ದ ಎಎಸ್‌ಐ ಕೃಷ್ಣಪ್ಪ ಮತ್ತು ಪೇದೆಗಳು ಪುಷ್ಪಾರ್ಪಣೆ ಮಾಡಿ ಸರಕಾರಿ ಗೌರವ ಸಲ್ಲಿಸಿದರು. ವಿಜಯಪುರದ ಡಿಆರ್ ತುಕಡಿ ಪೇದೆಗಳು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಅಂತಿಮ ವಂದನೆ ಸಲ್ಲಿಸಿದರು.
ಇಸ್ಲಾಂ ಧರ್ಮದ ಪ್ರಕಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ವೀರೇಶನಗರದಲ್ಲಿ ಅಂತಿಮ ವಿಧಿ ವಿಧಾನ ನಡೆಯಿತು. ಮೃತ ಪೇದೆಯ ತಂದೆ, ತಾಯಿ, ಸಹೋದರರು, ಸಹೋದರಿ, ಸ್ನೇಹಿತರು, ಅಪಾರ ಬಂಧು ಬಳಗ ಮತ್ತು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಪೇದೆಯ ಅಕಾಲಿಕ ನಿಧನಕ್ಕೆ ಕಣ್ಣೀರಿಟ್ಟರು.
ತರಬೇತಿ ವೇಳೆ ಅಕಾಲಿಕವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೇದೆಯ ಮನೆಯಲ್ಲಿ ಸರಕಾರಿ ನೌಕರಿ ಸೇರ ಬಯಸುವವರಿಗೆ ಅನುಕಂಪದ ಆಧಾರದ ಮೇಲೆ ಪರಿಗಣಿಸಲಾಗುತ್ತದೆ ಎಂದು ಮಂಡ್ಯದ ಪೊಲೀಸ್ ಅಧಿಕಾರಿಗಳು ತಿಳಿಸಿದರು.





