ಬ್ರಹ್ಮಾವರ: ಕೃಷಿ ಡಿಪ್ಲೋಮಾ ಕೋರ್ಸ್‌ಗೆ ಅರ್ಜಿ ಆಹ್ವಾನ
ಉಡುಪಿ, ಮೇ 24: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿ 2017-18ನೇ ಶೈಕ್ಷಣಿಕ ವರ್ಷದಲ್ಲಿ ಬ್ರಹ್ಮಾವರದಲ್ಲಿರುವ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಹಾಗೂ ದಾವಣಗೆರೆ ಜಿಲ್ಲೆ ಕತ್ತಲಗೆರೆ ಯಲ್ಲಿರುವ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯಗಳಲ್ಲಿ ಎರಡು ವರ್ಷಗಳ ಕೃಷಿ ಡಿಪ್ಲೋಮಾ ಕೋರ್ಸ್‌ಗಾಗಿ ಆಸಕ್ತ ವಿದ್ಯಾರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿರುವ ಈ ಮಹಾವಿದ್ಯಾಲಯಗಳಲ್ಲಿ ತಲಾ 35 ಅಭ್ಯರ್ಥಿಗಳಿಗೆ ಸೀಟು ಲಭ್ಯವಿದ್ದು, ಇದಕ್ಕಾಗಿ ಮೇ 29ರಿಂದ ಜೂ.14ರವರೆಗೆ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಅರ್ಜಿಯನ್ನು -www.uahs.in- ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಜೂನ್ 22 ಕೊನೆಯ ದಿನವಾಗಿರುತ್ತದೆ.
19 ವರ್ಷ ಪ್ರಾಯ ಮೀರದ ಕನಿಷ್ಠ ಎಸೆಸೆಲ್ಸಿ ತೇರ್ಗಡೆಗೊಂಡ ಅಭ್ಯರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.40ರಷ್ಟು ಮೀಸಲಾತಿ ಇರುತ್ತದೆ. ಈ ಎರಡು ವರ್ಷಗಳ ಡಿಪ್ಲೋಮಾ ಕೋರ್ಸ್‌ನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಹೈನುವಿಜ್ಞಾನ, ರೇಷ್ಮೆ ಕೃಷಿ, ಜೇನು ಕೃಷಿ ಮುಂತಾದ ಕೃಷಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ನುರಿತ ವಿಜ್ಞಾನಿಗಳಿಂದ ಭೋದಿಸಲಾಗುವುದು.
ಕೋರ್ಸ್‌ನ ಅವಧಿ ಎರಡು ವರ್ಷ (4 ಸೆಮಿಸ್ಟರ್) ದ್ದಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಗೂ ವಿವರಣಾ ಪುಸ್ತಕಗಳನ್ನು ಅಂಚೆ ಮೂಲಕ ಕುಲಸಚಿವರ ಕಚೇರಿ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಅಥವಾ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ/ ಕತ್ತಲಗೆರೆ ಇಲ್ಲಿಂದ ಮೇ 29ರಿಂದ ಜೂ.14ರವರೆಗೆ ನಿಗದಿತ ಶುಲ್ಕ ನೀಡಿ ಪಡೆಯಬಹುದು.
ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜೂ.22ರೊಳಗೆ ಕಳುಹಿಸಬಹುದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







