ಗಾಂಜಾ ಸಾಗಾಟ: ಇಬ್ಬರ ಬಂಧನ

ಮಂಗಳೂರು, ಮೇ 24: ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಉದಯ ನಾಯಕ್ ಅವರ ನೇತೃತ್ವದ ತಂಡದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಡಿಶಾದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಆರೋಪಿಗಳಿಂದ ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಒಡಿಶಾದ ಶಾಂತನುಕುಮಾರ್ ಶಾಹು (20) ಹಾಗೂ ಪಣಂಬೂರು ಮೀನಕಳಿಯದ ವಿಕ್ರಮ್ ಯಾನೆ ಜಯರಾಮ್ (27) ಬಂಧಿತ ಆರೋಪಿಗಳು.
ಆರೋಪಿಗಳನ್ನು ಬುಧವಾರ ನಗರದ ಮಂಗಳಾ ಕ್ರೀಡಾಂಗಣದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದು, ಬಂಧಿತರಿಂದ 2.5 ಲಕ್ಷ ರೂ. ಮೌಲ್ಯದ 5 ಕೆಜಿ ಗಾಂಜಾ, 12 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್, ಗಾಂಜಾ ತೂಕ ಮಾಡುವ ಮಾಪಕ, 500 ರೂ. ನಗದು ಹಣ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ರಿಕ್ಷಾ ಸೇರಿದಂತೆ ಸುಮಾರು 4,37,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಅಯುಕ್ತ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬರ್ಕೆ ಠಾಣೆಯ ಇನ್‌ಸ್ಪೆಕ್ಟರ್ ರಾಜೇಶ್ ಎ.ಕೆ. ಹಾಗೂ ಬರ್ಕೆ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ನರೇಂದ್ರ ಮತ್ತು ಎ.ಎಸ್.ಐ ಪ್ರಕಾಶ್, ಸಿಬ್ಬಂದಿಗಳಾದ ಗಣೇಶ್, ರಾಜೇಶ್ ಅತ್ತಾವರ, ಕಿಶೋರ್ ಕೋಟ್ಯಾನ್, ಕಿಶೋರ್ ಪೂಜಾರಿ, ನಾಗರಾಜ, ಮಹೇಶ್ ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.





