ಗಸ್ತು ವ್ಯವಸ್ಥೆಯಿಂದ ಪೊಲೀಸ್ ಸಿಬ್ಬಂದಿ ಸಬಲೀಕರಣ: ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು, ಮೇ 24: ರಾಜ್ಯ ಪೊಲೀಸ್ ಇಲಾಖೆಯು ಸುಧಾರಿತ ಗಸ್ತು ವ್ಯವಸ್ಥೆಯನ್ನು ಎ.1ರಿಂದ ಜಾರಿಗೆ ತಂದಿದೆ. ರಾಜ್ಯಾದ್ಯಂತ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ನೀಡುವುದೇ ಇದರ ಮುಖ್ಯ ಉದ್ದೇಶ ಎಂದು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
ಎಲ್ಲ ಪೊಲೀಸ್ ಅಧಿಕಾರಿಗಳು ಅಂದರೆ ಪೊಲೀಸ್ ಆಯುಕ್ತರು/ ಪೊಲೀಸ್ ಅಧೀಕ್ಷಕರಿಂದ ಪೊಲೀಸ್ ನಿರೀಕ್ಷಕರು/ಪೊಲೀಸ್ ಉಪನಿರೀಕ್ಷಕರವರೆಗೆ ನಿಗದಿತ ಭೌಗೋಳಿಕ ಸರಹದ್ದಿನಲ್ಲಿ ಪೊಲೀಸ್ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ಪಡೆಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಬಲವನ್ನು ಹೊಂದಿರುವ ಹೆಡ್ ಕಾನ್‌ಸ್ಟೇಬಲ್/ಪೊಲೀಸ್ ಕಾನ್‌ಸ್ಟೇಬಲ್ ಅವರಿಗೆ ಈ ಹಿಂದೆ ಯಾವುದೇ ನಿಗದಿತ ಭೌಗೋಳಿಕ ಸರಹದ್ದನ್ನು ಹಂಚಿಕೆ ಮಾಡಿಲ್ಲ. ಸುಧಾರಿತ ಗಸ್ತು ವ್ಯವಸ್ಥೆಯಡಿಯಲ್ಲಿ ಪೊಲೀಸ್ ಠಾಣೆಯಲ್ಲಿರುವ ಪ್ರತಿಯೊಬ್ಬ ಹೆಡ್ ಕಾನ್‌ಸ್ಟೇಬಲ್/ಪೊಲೀಸ್ ಕಾನ್‌ಸ್ಟೇಬಲ್ ಅವರಿಗೆ ಭೌಗೋಳಿಕ ಸರಹದ್ದನ್ನು ನಿಗದಿಗೊಳಿಸಿ, ಆ ಭೌಗೋಳಿಕ ಸರಹದ್ದಿನ ಜವಾಬ್ದಾರಿಯನ್ನು ನೀಡಿ, ಅವರನ್ನು ಗಸ್ತು ಪೊಲೀಸ್ ಅಧಿಕಾರಿಗಳನ್ನಾಗಿ ಮಾಡಲಾಗಿದೆ.
ನಿಗದಿಗೊಳಿಸಿರುವ ಸರಹದ್ದಿನ ಉಸ್ತುವಾರಿ ಪೊಲೀಸ್ ಅಧಿಕಾರಿ ಆಗಿರುತ್ತಾರೆ ಎಂದು ತಿಳಿಸಿದ್ದಾರೆ.
ಪೊಲೀಸರನ್ನು ಸಮುದಾಯದೊಂದಿಗೆ ಸಂಪರ್ಕಿಸುವುದು ಪ್ರತಿಯೊಂದು ಬೀಟ್‌ನಲ್ಲಿ ಒಂದು ಸಂಖ್ಯೆಯ ಸಾರ್ವಜನಿಕರನ್ನೊಳಗೊಂಡ ಗಸ್ತು ನಾಗರಿಕ ಸಮಿತಿ ಇರುತ್ತದೆ.
ಈ ಸಂಖ್ಯೆಯೂ ಪ್ರತಿಯೊಂದು ಬೀಟ್‌ನಲ್ಲಿ ಸುಮಾರು 30 ಆಗಿರುತ್ತದೆ. ಬೀಟ್ ವ್ಯಾಪ್ತಿಯಲ್ಲಿ ವಾಸಿಸುವ ಈ ಬೀಟ್ ನಾಗರಿಕ ಸಮಿತಿಯೂ ದಿನದ 24 ಗಂಟೆಯೂ ಬೀಟ್ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬಹುದು ಎಂದು ತಿಳಿಸಿದ್ದಾರೆ.







