ಸೌಲಭ್ಯಗಳು ಅರ್ಹರಿಗೆ ತಲುಪದೆ ಬಡವರಿಗೆ ವಂಚನೆ
ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿರ್ಲಕ್ಷ

ಚಿಕ್ಕಮಗಳೂರು, ಮೇ 24: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಸರಕಾರ ಸಾವಿರಾರು ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಆದರೆ ಯೋಜನೆಯ ಲಾಭವು ಅರ್ಹ ಫಲಾನುಭವಿಗಳಿಗೆ ತಲುಪದೇ ಬಡವರಿಗೆ ವಂಚನೆಯಾಗುತ್ತಿರುವ ದೂರು ಕೇಳಿ ಬರುತ್ತಿವೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಹಲವು ಯೋಜನೆಗಳಿವೆ. ಸ್ವಾವಲಂಬನಾ ಮಾರ್ಜಿನ್ ಹಣಸಾಲ ಮತ್ತು ಸಹಾಯಧನ ಯೋಜನೆ, ಅರಿವು ಯೋಜನೆ, ಶ್ರಮಶಕ್ತಿ ಯೋಜನೆ, ಸಣ್ಣಸಾಲ ಮತ್ತು ಸಹಾಯಧನ ಯೋಜನೆ, ಗಂಗಾಕಲ್ಯಾಣ, ಕೃಷಿಭೂಮಿ ಖರೀದಿ ಯೋಜನೆ, ಗೃಹ ನಿವೇಶನ ಖರೀದಿ ಹಾಗೂ ಮನೆ ನಿರ್ಮಾಣ ಸಾಲದ ಮೇಲಿನ ಬಡ್ಡಿ ಸಹಾಯಧನ ನೀಡುವ ಯೋಜನೆ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಇತ್ಯಾದಿ ಯೋಜನೆಗಳಿವೆ.
ಪ್ರಸಕ್ತ ಆರ್ಥಿಕ ವರ್ಷದ ಅವಧಿ ಮುಗಿದರೂ ಅರ್ಜಿದಾರರು ಎಲ್ಲ ದಾಖಲಾತಿಗಳನ್ನು ಜಿಲ್ಲಾ ಕೇಂದ್ರದ ಕಚೇರಿಗೆ ನೀಡಿ ವರ್ಷ ಕಳೆದರೂ ಪ್ರಯೋಜನವಾಗಿಲ್ಲ.
ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ಬಹುಪಾಲು ಜನರಿಗೆ ಆರ್ಥಿಕ ವರ್ಷದಲ್ಲಿ ಸಮಯಕ್ಕೆ ಸರಿಯಾಗಿ ಸಹಾಯಧನ, ಸಾಲ-ಸೌಲಭ್ಯ ದೊರಕದ ಆರೋಪಗಳಿವೆ. ರಾಜ್ಯ ಸರಕಾರ ಪ್ರಾಯೋಜಿತ ಯೋಜನೆಗಳನ್ನು ನಿಗಮದ ಜಿಲ್ಲಾ ಕಚೇರಿಗಳ ಮೂಲಕ ಅನುಷ್ಠಾನಗೊಳ್ಳಬೇಕು. ಕಚೇರಿ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆ ಪರಿಣಾಮ ನಿಗದಿತ ಅವಧಿಯೊಳಗೆ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿಲ್ಲ. ಹೀಗಾಗಿ ರಾಜ್ಯದ ವಿವಿಧೆಡೆಗಳಲ್ಲಿ ಅಲ್ಪಸಂಖ್ಯಾತ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಸಣ್ಣಪುಟ್ಟ ವ್ಯಾಪಾರದಿಂದ ಜೀವನೋಪಾಯ ಕಂಡುಕೊಳ್ಳಲು ಯತ್ನಿಸುತ್ತಿರುವವರು ಸರಕಾರದ ಸೌಲಭ್ಯಕ್ಕಾಗಿ ಅಲೆಯುವುದು ಮಾತ್ರ ತಪ್ಪಿಲ್ಲ. ಅರ್ಜಿದಾರರು ಆಯಾ ಜಿಲ್ಲಾ ಕೇಂದ್ರಗಳ ಕಚೆೇರಿಗಳಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕೇಂದ್ರ ಕಚೇರಿಯಿಂದ ಅನುದಾನ ಮಂಜೂರಾಗಿಲ್ಲ ಎನ್ನುವ ಸಬೂಬು ಸಿಗುತ್ತದೆ. ಬೆಂಗಳೂರಿನ ಕೇಂದ್ರ ಕಚೇರಿಯನ್ನು ಸಂಪರ್ಕಿಸಿದರೆ ಸೂಕ್ತ ಉತ್ತರ ಸಿಗುತ್ತಿಲ್ಲ. ನಿಮಗದ ಅಧ್ಯಕ್ಷರು ಜನರೊಂದಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳಿವೆ.
ಕೆಲ ಜಿಲ್ಲೆಗಳಿಗೆ ಮಾತ್ರವೇ ಗಮನ ಕೊಡುತ್ತಿರುವ ನಿಗಮವು ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ. ರಾಜ್ಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ ಸೇರಿದಂತೆ 96 ಲಕ್ಷಕ್ಕೂ ಅಧಿಕ ಅಲ್ಪಸಂಖ್ಯಾತರಿದ್ದಾರೆ. ಈ ಸಮುದಾಯದ ಬಹುಪಾಲು ಜನರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಇನ್ನಾದರೂ ನಿಗಮದ ಅಧ್ಯಕ್ಷರು ಮತ್ತು ಅಧಿಕಾರಿಗಳು ಈ ಕಡೆ ಗಮನ ಹರಿಸಬೇಕಿದೆ.
ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ನಿಗಮದ ವಿವಿಧ ಯೋಜನೆಗಳಿಗೆ ರಾಜ್ಯದಲ್ಲಿ ಒಟ್ಟು ಭೌತಿಕ ಗುರಿ 64,267 ಲಕ್ಷ, ಆರ್ಥಿಕ 20,000 ಲಕ್ಷ ಗುರಿ ಹೊಂದಿರುವುದಾಗಿ ನಿಗಮ ತಿಳಿಸಿದೆ.
ಇದರಲ್ಲಿ ಸ್ವಾವಲಂಬನೆ ಯೋಜನೆಗೆ ಭೌತಿಕ 5,333 ಲಕ್ಷ, ಆರ್ಥಿಕ 1,600 ಲಕ್ಷ, ಅರಿವು ಯೋಜನೆಗೆ ಭೌತಿಕ 25,333 ಲಕ್ಷ, ಆರ್ಥಿಕ 7,600 ಲಕ್ಷ ಅನುದಾನ, ಶ್ರಮಶಕ್ತಿ ಯೋಜನೆಗೆ ಭೌತಿಕ 6,800 ಲಕ್ಷ, ಆರ್ಥಿಕ 3,400 ಲಕ್ಷ, ಮೈಕ್ರೊಲೋನ್ ಭೌತಿಕ 24,000 ಲಕ್ಷ, ಆರ್ಥಿಕ 2,400, ಕೃಷಿ ಭೂಮಿ ಖರೀದಿಗೆ ಭೌತಿಕ 134 ಲಕ್ಷ, ಆರ್ಥಿಕ 1,000 ಲಕ್ಷ, ಗಂಗಾಕಲ್ಯಾಣ ಯೋಜನೆಗೆ ಭೌತಿಕ 2,667 ಲಕ್ಷ, ಆರ್ಥಿಕ 4,000 ಲಕ್ಷ ಮೀಸಲಿಡುವ ಗುರಿ ಹೊಂದಿರುವುದಾಗಿ ನಿಗಮದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.







