ಮೇ 26: ಉಚಿತ ಮಧುಮೇಹ ತಪಾಸಣೆ, ಮಾಹಿತಿ ಶಿಬಿರ
ಮೂಡುಬಿದಿರೆ, ಮೇ 24: ಆಯುರ್‌ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ (ರಿ) ಗಂಜಿಮಠ ಮತ್ತು ಆಯುರ್‌ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠ ಇದರ ಆಶ್ರಯದಲ್ಲಿ ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನದ ಅಂಗವಾಗಿ ಉಚಿತ ಮಧುಮೇಹ ತಪಾಸಣೆ ಮತ್ತು ಮಾಹಿತಿ ಶಿಬಿರ ಕಟೀಲು ದೇವಸ್ಥಾನದ ಆವರಣದಲ್ಲಿ ಮೇ 26 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿದೆ.
ಶಿಬಿರದಲ್ಲಿ ಕಟೀಲು ಎಲ್ಲಾ 6 ಮೇಳದ ಕಲಾವಿದರಿಗೆ, ದೇವಳದ ಸಿಬ್ಬಂದಿ ವರ್ಗಕ್ಕೆ ಮತ್ತು ದೇವಳದ ಭಕ್ತರಿಗೆ ಒಟ್ಟು ಸುಮಾರು 500 ಕ್ಕೂ ಅಧಿಕ ಮಂದಿಗೆ ಉಚಿತ ತಪಾಸಣೆ ನಡೆಸಲಾಗುವುದು.
ದೇಶದಾದ್ಯಂತ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಸರಣಿ ಜಾಗೃತಿ ಕಾರ್ಯಕ್ರಮದಲ್ಲಿ ಈವರೆಗೆ ಸುಮಾರು 1,500 ಜನರಿಗೆ ಉಚಿತ ತಪಾಸಣೆ ಮತ್ತು ಮಾಹಿತಿ ನೀಡಲಾಗಿದೆ.
ಮೊದಲು ದ.ಕ. ಜಿಲ್ಲೆಯಲ್ಲಿ ಆರಂಭಿಸಿ ಇದೀಗ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗಿದೆ. ಮೇ 5 ರಂದು ಮಂಡ್ಯದಲ್ಲಿ ಮಧುಮೆಹ ಮುಕ್ತ ಭಾರತ ಅಭಿಯಾನ ನಡೆಸಲಾಗಿದ್ದು, ಮುಂದೆ ಮೈಸೂರು, ಬೆಂಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ನಡೆಸಲು ತೀರ್ಮಾನವಾಗಿದೆ.
ಮಧುಮೇಹಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾದ ಔಷಧಗಳ ಬಗ್ಗೆ ಸಂಶೋಧನೆ ನಡೆಸಲು ಒತ್ತು ನೀಡಲಾಗುವುದು.
ಮೇ 26 ರಂದು ಕಟೀಲಿನಲ್ಲಿ ಶಿಬಿರವನ್ನು ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಆಡಳಿತ ಸಮಿತಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ವಹಿಸಲಿದ್ದಾರೆ. ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಪದ್ಮನಾಭ ಅಸ್ರಣ್ಣ ಮತ್ತು ಮೇಳದ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿರುವರು.
ಫೌಂಡೇಶನ್ ಅಧ್ಯಕ್ಷ ಡಾ.ಸತೀಶ ಶಂಕರ ಬಿ. ಮಧುಮೇಹದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.







