ಸಾಲಬಾಧೆ: ಇಬ್ಬರು ರೈತರು ಆತ್ಮಹತ್ಯೆ

ಪುಟ್ಟಸ್ವಾಮಿ, ಎಚ್. ಹನುಮೇಗೌಡ
ಮಂಡ್ಯ, ಮೇ 24: ಸಾಲಬಾಧೆ ತಾಳಲಾರದೆ ಮದ್ದೂರು ತಾಲೂಕಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಟನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಅಲಿಯಾಸ್ ಬೋರ (56) ಮತ್ತು ಕರಡಕೆರೆ ಗ್ರಾಮದ ಎಚ್. ಹನುಮೇಗೌಡ (55) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಗ್ಗೆಯಿಂದ ಕಾಣೆಯಾಗಿದ್ದ ಕುಂಟನಹಳ್ಳಿಯ ಪುಟ್ಟಸ್ವಾಮಿ ಮದ್ದೂರು ರೈಲ್ವೆ ನಿಲ್ದಾಣದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುಟ್ಟಸ್ವಾಮಿ ಎರಡು ಎಕರೆ ಜಮೀನು ಹೊಂದಿದ್ದು, ಕಬ್ಬು, ಭತ್ತ, ರಾಗಿ, ಹಿಪ್ಪುನೇರಳೆ, ಇತರೆ ಬೆಳೆಗಳನ್ನು ಬೆಳೆಯುತ್ತಿದ್ದು, ಮಳೆಯಿಲ್ಲದೆ ಪ್ರಸಕ್ತ ಸಾಲಿನ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು ಎನ್ನಲಾಗಿದೆ.
ತನ್ನ ಪತಿ ಕೃಷಿ ಚಟುವಟಿಕೆಗಾಗಿ ಸುಮಾರು 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಬೆಳೆ ನಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಸವಿತ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಮಂಡ್ಯ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರಡಕೆರೆಯ ಎಚ್. ಹನುಮೇಗೌಡ (55) 4 ಎಕರೆ ಕೃಷಿ ಜಮೀನು ಹೊಂದಿದ್ದು, ಕೃಷಿ ಚಟುವಟಿಕೆಗಾಗಿ 1 ಲಕ್ಷ ರೂ., ಮದ್ದೂರು ಬ್ಯಾಂಕ್ನಲ್ಲಿ 65 ಸಾವಿರ ರೂ., 2 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನಲಾಗಿದೆ.
ಮಳೆಬೆಳೆ ಇಲ್ಲದೆ ಸಾಲದ ಒತ್ತಡದಿಂದ ಬೇಸತ್ತ ಹನುಮೇಗೌಡ, ಮಂಗಳವಾರ ಮಧ್ಯಾಹ್ನ ತನ್ನ ಜಮೀನಿನ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರಿಗೆ ಪತ್ನಿ ಸೇರಿದಂತೆ ಮೂವರು ಮಕ್ಕಳಿದ್ದು, ಪುತ್ರ ಚಂದನ್ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.







