ಅಶ್ವಿನ್‌ಗೆ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ

ಮುಂಬೈ, ಮೇ 24: ಭಾರತದ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಬುಧವಾರ ಇಲ್ಲಿ ನಡೆದ ಸಿಯೆಟ್ ಕ್ರಿಕೆಟ್ ರೇಟಿಂಗ್(ಸಿಸಿಆರ್) ಇಂಟರ್‌ನ್ಯಾಶನಲ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ‘ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ’ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಮಾರಂಭದಲ್ಲಿ ಅಶ್ವಿನ್‌ಗೆ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹಾಗೂ ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಚೇರ್ಮನ್ ಹರ್ಷ ಗೊಯೆಂಕ ಪ್ರಶಸ್ತಿ ಪ್ರದಾನ ಮಾಡಿದರು.
ಭಾರತ ತಂಡ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ನ್ಯೂಝಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯ ವಿರುದ್ಧದ 13 ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಜಯಿಸಿ ಅಪೂರ್ವ ಸಾಧನೆ ಮಾಡಲು ಅಶ್ವಿನ್ ಮಹತ್ವದ ಕೊಡುಗೆ ನೀಡಿದ್ದರು. ಅಶ್ವಿನ್ ಕಳೆದ 12 ತಿಂಗಳ ಅವಧಿಯಲ್ಲಿ ಒಟ್ಟು 99 ವಿಕೆಟ್‌ಗಳನ್ನು ಕಬಳಿಸಿದ್ದರು.
ಇದೇ ವೇಳೆ, ಯುವ ಬ್ಯಾಟ್ಸ್‌ಮನ್ ಶುಭಂ ಗಿಲ್ ವರ್ಷದ ಯುವ ಆಟಗಾರ ಪ್ರಶಸ್ತಿಗೆ ಭಾಜನರಾದರು. ಮುಂಬೈನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಅಂಡರ್-19 ಏಕದಿನ ಸರಣಿಯಲ್ಲಿ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಶ್ವಿನ್ ಚೆನ್ನೈನ ಚಿಪಾಕ್ ಸ್ಟೇಡಿಯಂನಲ್ಲಿ ಸುನೀಲ್ ಗವಾಸ್ಕರ್‌ರಿಂದ ಮೊದಲ ಬಾರಿ ಹಸ್ತಾಕ್ಷರ ಪಡೆದ ಕ್ಷಣವನ್ನು ನೆನಪಿಸಿಕೊಂಡರು. ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದ ತಮ್ಮದೇ ರಾಜ್ಯದ ವಾಷಿಂಗ್ಟನ್ ಸುಂದರ್ ಅವರನ್ನು ಅಶ್ವಿನ್ ಶ್ಲಾಘಿಸಿದರು.
‘‘ಸುಂದರ್ ಅವರು ವಿಜಯ ಹಝಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸುಂದರ್ ಚೆನ್ನಾಗಿ ಆಡುತ್ತಾರೆಂದು ಹಲವರು ಹೇಳಿದ್ದನ್ನು ನಾನು ಕೇಳಿದ್ದೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂದು ಆತನಿಗೆ ಚೆನ್ನಾಗಿ ಗೊತ್ತಿದೆ. ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವುದು ದೊಡ್ಡ ಸವಾಲು’’ ಎಂದು ಅಶ್ವಿನ್ ಹೇಳಿದ್ದಾರೆ.







