ಕರ್ಣಾಟಕ ಬ್ಯಾಂಕ್ - ಜೀವ ವಿಮಾ ನಿಗಮ ಒಪ್ಪಂದ

ಮಂಗಳೂರು, ಮೇ 25: ಭಾರತೀಯ ಜೀವವಿಮಾ ನಿಗಮದ ಉತ್ಪನ್ನಗಳ ಮಾರಾಟಕ್ಕೆ ಕರ್ಣಾಟಕ ಬ್ಯಾಂಕ್ ಸೋಮವಾರದಂದು ಜೀವವಿಮಾ ನಿಗಮದ (ಎಲ್ಲೈಸಿ) ಜೊತೆ ಒಪ್ಪಂದ ಮಾಡಿಕೊಂಡಿದೆ.
93 ವರ್ಷಗಳ ಬ್ಯಾಂಕಿಂಗ್ ಅನುಭವದ ಕರ್ಣಾಟಕ ಬ್ಯಾಂಕ್ ತನ್ನ ವ್ಯವಹಾರದ ಕ್ಷೇತ್ರವನ್ನು ಕ್ಷೀಪ್ರವಾಗಿ ವರ್ಧಿಸಿಕೊಳ್ಳುತ್ತಿದೆ. ತಂತ್ರಜ್ಞಾನದ ಅನುಷ್ಠಾನ, ಗ್ರಾಹಕಪರ ಉತ್ಪನ್ನಗಳ ಜತೆ ಮೂರನೆ ಸಂಸ್ಥೆಗಳ ಉತ್ಪನ್ನಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿ ಒದಗಿಸುತ್ತಿದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, ಗ್ರಾಹಕರ ಅಗತ್ಯಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಗ್ರಾಹಕ ಪರವಾದ ಯೋಜನೆಗಳಿಗೆ ಆದ್ಯತೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಎಲ್ಲೈಸಿ ಜತೆಗಿನ ಒಪ್ಪಂದದಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಕರ್ಣಾಟಕ ಬ್ಯಾಂಕ್ ಮತ್ತು ಎಲ್ಲೈಸಿಯು ದೇಶಾದ್ಯಂತ ಮನೆ ಮಾತಾಗಿರುವ ಸಂಸ್ಥೆಗಳು. ಬ್ಯಾಂಕಿನ ಎಲ್ಲ 769 ಶಾಖೆಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಎಂದರು.
ಎಲ್ಲೈಸಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್‌ಕುಮಾರ ಒಪ್ಪಂದದಿಂದ ಮತ್ತಷ್ಟು ವಿಸ್ತರಣೆಯು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಬ್ಯಾಂಕಿನ ಜನರಲ್ ಮ್ಯಾನೇಜರ್‌ಗಳಾದ ಚಂದ್ರಶೇಖರ್ ರಾವ್ ಬಿ., ಸುಭಾಶ್ಚಂದ್ರ ಪುರಾಣಿಕ್, ಬಾಲಚಂದ್ರ ವೈ.ವಿ., ನಾಗರಾಜ ರಾವ್ ಬಿ., ಮುರುಲೀಧರ ಕೃಷ್ಣರಾವ್, ಎಲ್ಲೈಸಿಯ ರೀಜನಲ್ ಮ್ಯಾನೇಜರ್ ಆರಾಧನಾ ಶಾನ್‌ಭಾಗ್ ಉಪಸ್ಥಿತರಿದ್ದರು.





