ದಲಿತ ದಂಪತಿಗೆ ಭೂಮಿ ನೀಡದೆ ಶೋಷಣೆ
ಬಂಟ್ವಾಳ, ಮೇ 24: ಭೂಮಿ ಕಳೆದುಕೊಂಡ ದಲಿತ ದಂಪತಿಗೆ ಪರಿಹಾರ ನೀಡಬೇಕೆಂದು 2001ರಲ್ಲಿ ಆದೇಶವಾಗಿದ್ದರೂ ಈವರೆಗೆ ಅವರಿಗೆ ಪರಿಹಾರ ನೀಡದೆ ಅಧಿಕಾರಿಗಳು ಶೋಷಣೆ ಮಾಡುತ್ತಿದ್ದಾರೆ ಎಂದು ತಾಲೂಕು ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಬಿ.ಸಿ.ರೋಡ್ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜನಾರ್ದನ , ಮೂಡನಡುಗೋಡು ಗ್ರಾಮದ ಅಪ್ಪಿಪೆರ್ನೆ ದಲಿತ ದಂಪತಿಗೆ 1964ರಲ್ಲಿ ಮಂಜೂರಾದ 2 ಎಕರೆ ಭೂಮಿಯನ್ನು 1974ರಲ್ಲಿ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದಿತ್ತು. ಈ ಬಗ್ಗೆ ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ಸಹಾಯಕ ಕಮಿಷನರ್ ದಲಿತ ದಂಪತಿಗೆ 4 ಎಕರೆ ಭೂಮಿ ಹಾಗೂ ಪರಿಹಾರ ನೀಡಬೇಕೆಂದು 2001ರಲ್ಲಿ ಆದೇಶಿದ್ದರು. ಆದರೆ 17 ವರ್ಷ ಕಳೆದರೂ ಭೂಮಿಯಾಗಲಿ ಪರಿಹಾರವಾಗಲೀ ಈವರೆಗೆ ಸಿಕ್ಕಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ, ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದರು.
ಬಂಟ್ವಾಳ ಸಮುದಾಯ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ಮಾಡಲು ಸಿಬ್ಬಂದಿ ಇಲ್ಲದೆ ಹಲವು ವರ್ಷಗಳು ಕಳೆಯಿತು. ಹಲವು ಹೋರಾಟದ ಬಳಿಕ ತರಬೇತಿ ಪಡೆದಿರುವ ಸಂಚಯಗಿರಿ ಆಸ್ಪತ್ರೆಯ ಕೇಶವ ಎಂಬವರನ್ನು ಸಮುದಾಯ ಆಸ್ಪತ್ರೆಗೆ ವರ್ಗಾಹಿಸಲಾಗಿದೆ. ಡಿಸೆಂಬರ್‌ನಲ್ಲಿ ವರ್ಗಾವಣೆಯಾದರೂ ಅವರು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಆದರೆ ಅವರು ಸಮುದಾಯ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿರುವ ಬಗ್ಗೆ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿರುವುದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಯಲ್ಲಿ ತಿಳಿದು ಬಂದಿದೆ ಎಂದು ಸಭೆಗೆ ವಿಶ್ವನಾಥ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಅಧಿಕಾರಿ, ಸಂಚಯಗಿರಿ ಆಸ್ಪತ್ರೆಯಿಂದ ವರ್ಗಾವಣೆಗೊಂಡಿರುವ ಡಿ ಗ್ರೂಪ್ ನೌಕರ ಕೇಶವರನ್ನು ಕೂಡಲೇ ಕೆಲಸ ನಿರ್ವಹಿಸುವಂತೆ ಮಾಡಲಾಗುವುದು. ಒಂದು ವೇಳೆ ಅವರು ಕೆಲಸಕ್ಕೆ ಹಾಜರಾಗದಿದ್ದಲ್ಲಿ ಅವರ ವೇತನ ತಡೆ ಹಿಡಿಯಲಾಗುವುದು ಎಂದರು.
ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಪ್ರಿಯಾ ಮಿರಾಂದ ಸ್ವಾಗತಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ದಲಿತ ಮುಖಂಡರು ಭಾಗವಹಿಸಿದ್ದರು.







