ಬೆಳ್ತಂಗಡಿ: ಮೇ 27ರಿಂದ ‘ಸಿರಿಧಾನ್ಯ ಆಹಾರ ಮೇಳ’
ಬೆಳ್ತಂಗಡಿ, ಮೇ 24: ಸಿರಿ ಧಾನ್ಯಗಳ ಬಳಕೆಯನ್ನು ಕರಾವಳಿ ಭಾಗದ ಜನರಿಗೆ ಪರಿಚಯಿಸಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸುವ ಉದ್ದೇಶದಿಂದ ಸಿರಿ ಧಾನ್ಯ ಆಹಾರ ಮೇಳವನ್ನು ಮೇ 27ರಿಂದ 29 ರವರೆಗೆ ಬೆಳ್ತಂಗಡಿ ಲಾಯಿಲದ ರಾಘವೇಂದ್ರ ಮಠದ ಬಳಿ ಇರುವ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕಿ ಮನೋರಮಾ ಭಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 27ರಂದು ಬೆಳಗ್ಗೆ 10:30ಕ್ಕೆ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಸಿರಿ ಧಾನ್ಯಗಳ ಆಹಾರ ಮೇಳವನ್ನು ಉದ್ಘಾಟಿಸಲಿದ್ದಾರೆ.
ಪ್ರತಿ ದಿನ ಬೆಳಗ್ಗೆ 8:30ರಿಂದ ರಾತ್ರಿ 8 ಗಂಟೆಯವರಿಗೆ ಸಿರಿ ಧಾನ್ಯಗಳಿಂದ ತಯಾರಿಸಿದ ಶುಚಿ, ರುಚಿಯಾದ ಉಪಾಹಾರ ಭೋಜನ, ಸಿಹಿ ತಿಂಡಿಗಳು, ವಿವಿಧ ರೀತಿಯ ರೊಟ್ಟಿಗಳು, ದೋಸೆಗಳು, ಸೂಪ್, ಜ್ಯೂಸ್‌ಗಳು ಹಾಗೂ ಚಾಟ್‌ಗಳು ಲಭ್ಯವಿದ್ದು, ಸಾರ್ವಜನಿಕರು ಸಿರಿ ಧಾನ್ಯಗಳ ಆಹಾರವನ್ನು ಸವಿಯಬಹುದಾಗಿದೆ.
ಇದರೊಂದಿಗೆ ಸಿರಿ ಧಾನ್ಯಗಳ ಪ್ರಯೋಜನದ ಬಗ್ಗೆ ಮಾಹಿತಿ ಕಾರ್ಯಕ್ರಮಗಳು ಹಾಗೂ ಪ್ರತಿ ದಿನ ಸಂಜೆ 6 ಗಂಟೆಯಿಂದ 6:45ರವರೆಗೆ ಸಿರಿ ಧಾನ್ಯಗಳ ತಯಾರಿಕಾ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ. ಸಿರಿ ಧಾನ್ಯಗಳು ಹಾಗೂ ಮೌಲ್ಯ ವರ್ಧಿತ ಸಿರಿ ಧಾನ್ಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ 9448770501, 9741414646, 9449200803ನ್ನು ಸಂಪರ್ಕಿಸಬಹುದುಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ, ಕೃಷಿ ನಿರ್ದೇಶಕ ಮನೋಜ್ ಮಿನೇಜಸ್, ಸಿರಿ ಯೋಜನಾಧಿಕಾರಿ ರೋಹಿತ್ ಇದ್ದರು.







