ಬುದ್ಧಿಮಾಂದ್ಯ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

ಹೊನ್ನಾವರ, ಮೇ 24: ತಾಲೂಕಿನ ಕರ್ಕಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಬುದ್ಧಿಮಾಂದ್ಯ ಬಾಲಕಿಯ ಮೇಲೆ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಘಟನೆ ಬೆಳಕಿ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿಯನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.
ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ (52) ಎಂದು ಗುರುತಿಸಲಾಗಿದ್ದು, ಈತ ಕರ್ಕಿಯ ಮೀನು ಮಾರ್ಕೇಟ್ ಸಮೀಪ ನ್ಯೂ ರೂಪ್ ಎಂಬ ಹೆಸರಿನ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದ.
ತನ್ನ ಬಟ್ಟೆ ಹೊಲಿಸಲೆಂದು ಆತನ ಅಂಗಡಿಗೆ ಬರುತ್ತಿದ್ದ 17 ವರ್ಷದ ಬುದ್ಧಿಮಾಂದ್ಯ ಬಾಲಕಿಯ ಮನವೊಲಿಸಿ ಅನೇಕ ಬಾರಿ ಅತ್ಯಾಚಾರವೆಸಗಿದ್ದ. ಬಾಲಕಿಗೆ ಅನಾರೋಗ್ಯವಿರವುದನ್ನು ಗಮನಿಸಿದ ಆಕೆಯ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಕಂಡಿಬಂದಿದ್ದು, ಬಾಲಕಿ ಗರ್ಭಿಣಿಯಾಗಿರುವುದು ಧೃಡಪಟ್ಟಿತ್ತು.
ಈ ಪ್ರಕರಣ ಹೊನ್ನಾವರ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆ ಆರೋಪಿ ಸುಬ್ರಹ್ಮಣ್ಯ ರಾಮ ಭಂಡಾರಿ ಟೈಲರಿಂಗ್ ಅಂಗಡಿ ಮುಚ್ಚಿ ತಲೆಮರೆಸಿಕೊಂಡಿದ್ದನು. ಬಾಲಕಿಯನ್ನು ಕಾರವಾರ ಸ್ವೀಕಾರ ಕೇಂದ್ರದಲ್ಲಿ ದಾಖಲಿಸಿದ್ದು, ಆಕೆ ಗಂಡು ಮಗುವಿಗೆ ಜನ್ಮವಿತ್ತಿದ್ದಳು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊನ್ನಾವರ ಪೊಲೀಸರು ಆರೋಪಿಯ ಸುಳಿವಿಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದರೂ ಪತ್ತೆಯಾಗದೇ ಸವಾಲಾಗಿ ಪರಿಣಮಿಸಿತ್ತು. ಈತನ್ಮಧ್ಯೆ ವಿವಿಧ ಮಹಿಳಾ ಸಂಘಟನೆಗಳು ಆರೋಪಿಯನ್ನು ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದವು. ಮಹಾರಾಷ್ಟ್ರ ದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಿಡಿದು ತಂದು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗೆ ಸಹಕಾರ ನೀಡಿದ ಗೌರೀಶ ಸುಬ್ರಾಯ ಭಂಡಾರಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







