ಈಗ ಚರ್ಚೆಯಾಗಬೇಕಾದ್ದು ಬಿಜೆಪಿಗರು ಶಾಮೀಲಾಗಿರುವ ಸೆಕ್ಸ್ ಹಗರಣಗಳ ಬಗ್ಗೆ : ಶೆಹ್ಲಾ ರಶೀದ್
" ಅಭಿಜಿತ್, ಸೋನು ನಿಗಮ್ ಟ್ವೀಟ್ ಮುಖ್ಯ ಅಲ್ಲ "

ಹೊಸದಿಲ್ಲಿ, ಮೇ 24: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಿದ್ದ ಗಾಯಕ ಅಭಿಜೀತ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಎನ್ ಯುಎಸ್ ಯು ಮಾಜಿ ಉಪಾಧ್ಯಕ್ಷೆ, ಹೋರಾಟಗಾರ್ತಿ ಶೆಹ್ಲಾ ರಶೀದ್, "ಅಭಿಜೀತ್ ನನ್ನನ್ನು ವೇಶ್ಯೆಯೆಂದು ಕರೆದಿದ್ದಾರೆ. ತಮ್ಮ ಸಮಾಜವಿರೋಧಿ ಚಟುವಟಿಕೆಗಳು ಹಾಗೂ ಲೈಂಗಿಕ ಹಗರಣಗಳ ಆರೋಪಗಳ ವಿರುದ್ಧ ಬಿಜೆಪಿ ನಾಯಕರು ಅಭಿಜಿತ್ ರ ಈ ಹೇಳಿಕೆಯನ್ನು ರಕ್ಷಣೆಗಾಗಿ ಬಳಸುತ್ತಿದ್ದಾರೆ " ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಹಲವು ಲೈಂಗಿಕ ಹಗರಣಗಳ ಬಗ್ಗೆ ಬೆಳಕು ಚೆಲ್ಲಿರುವ ಶೆಹ್ಲಾ, ಈ ಬಗೆಗಿನ ಲಿಂಕ್ ಗಳನ್ನೂ ತಮ್ಮ ಪೋಸ್ಟ್ ನಲ್ಲಿ ನಮೂದಿಸಿದ್ದಾರೆ. ಶೆಹ್ಲಾ ರಶೀದ್ ರ ಪೋಸ್ಟ್ ನ ಮುಖ್ಯಾಂಶಗಳು ಇಲ್ಲಿವೆ :
“‘ಎರಡು ಗಂಟೆಗಳಿಗೆ ಹಣ ಪಡೆದುಕೊಂಡ ಆಕೆ ಗಿರಾಕಿಗಳನ್ನು ಸಂತೋಷಪಡಿಸಿಲ್ಲ.. ದೊಡ್ಡ ಹಗರಣ’ ಎಂದು ಅಭಿಜೀತ್ ಟ್ವೀಟ್ ಮಾಡಿದ್ದರು. ನನ್ನನ್ನು ವೇಶ್ಯೆಯೆಂದು ಜರೆದಿದ್ದರು. ತಮ್ಮ ಲೈಂಗಿಕ ಹಾಗೂ ಇತರ ಹಗರಣಗಳ ಬಗ್ಗೆ ಧ್ವನಿಯೆತ್ತುವವರ ವಿರುದ್ಧ ಬಿಜೆಪಿ ನಾಯಕರು ಬಳಸುವ ಅಸ್ತ್ರ ಇಂತಹ ಹೇಳಿಕೆಗಳಾಗಿದೆ.”
“ಮಧ್ಯಪ್ರದೇಶದಲ್ಲಿ ಸೆಕ್ಸ್ ದಂಧೆಯಲ್ಲಿ ಬಿಜೆಪಿಯ ನಾಯಕರು ಭಾಗಿಯಾಗಿರುವ ಬಗೆಗಿನ ಸುದ್ದಿಯೊಂದರ ಲಿಂಕ್ ಅನ್ನು ನಾನು ಮೇ 21ರಂದು ಬೆಳಗ್ಗೆ 8:30ಕ್ಕೆ ಟ್ವೀಟ್ ಮಾಡಿದ್ದೆ. ಇದೇ ರಾಜ್ಯದಲ್ಲಿ ಮೂರು ತಿಂಗಳ ಹಿಂದೆ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ್ದ ಬಿಜೆಪಿ ನಾಯಕ ಧ್ರುವ್ ಸಕ್ಸೇನಾ ಎಂಬಾತನನ್ನು ಬಂಧಿಸಲಾಗಿತ್ತು. ಇದೇ ರಾಜ್ಯದಲ್ಲಿ ಬಿಜೆಪಿ ಸರಕಾರದ ಮೂಗಿನ ಕೆಳಗೆ “ವ್ಯಾಪಂ ಹಗರಣ” ನಡೆದಿತ್ತು. ಈಗ ಭಯೋತ್ಪಾದನೆಗೆ ಹಣಕಾಸಿನ ಸಹಕಾರ ನೀಡಿದ್ದಕ್ಕಾಗಿ ಅಸ್ಸಾಂನಲ್ಲಿ ಬಿಜೆಪಿ ನಾಯಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ”. (http://indianexpress.com/…/assam-bjp-leader-2-others-get-l…/)
“ಗುಜರಾತ್ ನಲ್ಲಿ ಆಘಾತಕಾರಿ ಸೆಕ್ಸ್ ದಂಧೆಯೊಂದು ಬೆಳಕಿಗೆ ಬಂದಿತ್ತು. ಇದರಲ್ಲಿ ಸ್ಥಳಿಯ ಪ್ರಭಾವಿ ನಾಯಕರು ಪಾಲ್ಗೊಂಡಿದ್ದರಲ್ಲದೆ, ಸ್ಥಳೀಯ ಸಂಸದ ವಿನೋದ್ ಚಾವ್ಡಾಗೂ ಈ ಬಗ್ಗೆ ಅರಿವಿತ್ತು!. (http://www.thehindu.com/…/Another-BJP-l…/article17293027.ece). ಬಂಗಾಳದಲ್ಲಿ ಮಕ್ಕಳ ಕಳ್ಳ ಸಾಗಾಣಿಕಾ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅದರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ಮಹಿಳಾ ಘಟಕದ ನಾಯಕಿ ಜೂಹಿ ಚೌಧರಿ ಹಾಗೂ ರೂಪಾ ಗಂಗೂಲಿ ಹೆಸರುಗಳು ಕೇಳಿಬಂದಿತ್ತು”. (http://www.hindustantimes.com/…/story-uFOBvJLzqKO4gGAXzloQk…)
“ಬಿಜೆಪಿಯ ಅಧಿಕಾರದ ಬಲ, ಕಾನೂನು-ನಿಯಮಗಳ ಉಲ್ಲಂಘನೆ ಹಾಗೂ ಅಪರಾಧ ಚಟುವಟಿಕೆಗಳಿಗೆ ಪ್ರೋತ್ಸಾಹದಿಂದ ಬಿಜೆಪಿ ನಾಯಕರು ಎಲ್ಲಾ ಬಗೆಯ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ನೋಟು ಅಮಾನ್ಯದ ಕಠಿಣ ದಿನಗಳಲ್ಲೂ ಬಿಜೆಪಿ ನಾಯಕರು 22 ಲಕ್ಷ ಹಾಗೂ 33 ಲಕ್ಷ ಮೌಲ್ಯದ ಹೊಸ ನೋಟುಗಳೊಂದಿಗೆ ಚೆನ್ನೈ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಕ್ಕಿ ಬಿದ್ದಿದ್ದರು”.
“ಅಭಿಜೀತ್ ಹಾಗೂ ನನ್ನನ್ನು ನಿಂದಿಸಿದ ಬಿಜೆಪಿಯ ಇತರ ಬೆಂಬಲಿಗರನ್ನು ವಿರೋಧಿಸಿದವರಿಗೆ ನಾನು ಕೃತಜ್ಞಳಾಗಿದ್ದೇನೆ. ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಯಲ್ಲ. ಬದಲಾಗಿ, ಸೆಕ್ಸ್ ದಂಧೆ ಹಾಗೂ ಮಕ್ಕಳ ಕಳ್ಳಸಾಗಾಣಿಕಾ ಜಾಲದಿಂದ ಬಂದ ನಿಂದನೆಯಾಗಿದೆ. ಲೈಂಗಿಕ ಹಗರಣಗಳ ಬಗ್ಗೆ ನಾನು ಮಾತನಾಡಿರುವುದನ್ನು ಅಭಿಜೀತ್ ಏಕೆ ವಿರೋಧಿಸಿದರು?. ಖಂಡಿತವಾಗಿಯೂ ಏಕೆಂದರೆ ಅವರು ಬಿಜೆಪಿ ಬೆಂಬಲಿಗ ಹಾಗೂ ಮೋದಿ ಅಭಿಮಾನಿ”.
“ತಾನು ಟ್ವಿಟ್ಟರ್ ತೊರೆಯುತ್ತಿರುವುದರ ಕಾರಣಗಳ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದ ಸೋನು ನಿಗಮ್ ನಾನು ಬಿಜೆಪಿ ನಾಯಕರು ಸೆಕ್ಸ್ ದಂಧೆಯಲ್ಲಿ ಭಾಗಿಯಾಗಿರುವುದಾಗಿ ಆರೋಪ ಮಾಡಿರುವುದೂ ಒಂದು ಕಾರಣ ಎಂದಿದ್ದರು. ನನ್ನ ಆರೋಪಗಳು ಬಿಜೆಪಿ ಬೆಂಬಲಿಗರನ್ನು ಕೆಣಕುವಂತಿದೆ ಎಂದಿದ್ದರು. ವೇಶ್ಯಾವಾಟಿಕೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂದು ನಾನೊಬ್ಬಳೇ ಹೇಳಿದ್ದಲ್ಲ ಎನ್ನುವುದನ್ನು ಅವರಿನ್ನೂ ಅರ್ಥ ಮಾಡಿಕೊಂಡಿಲ್ಲ. ಬಿಜೆಪಿ ನಾಯಕರ ಈ ಚಟುವಟಿಕೆಯ ಬಗ್ಗೆ ಬಂಧಿತರಾದ ಬಿಜೆಪಿಯ ಗ್ಯಾಂಗ್ ಸದಸ್ಯರೇ ಆರೋಪ ಮಾಡಿದ್ದಾರೆ. ಈ ವಿಷಯ ಬಿಜೆಪಿ ಬೆಂಬಲಿಗರನ್ನು “ಕೆಣಕುವುದಿಲ್ಲವೇ”. ಬಿಜೆಪಿಯನ್ನು ಬಿಟ್ಟು ಅದರ ನಾಯಕರನ್ನು ಪ್ರಶ್ನಿಸಲು ಅವರಿಗೆ ಇದು ಸಾಕಾಗುವುದಿಲ್ಲವೇ ? ನನ್ನ ಟ್ವೀಟ್ ಗಳು ಪ್ರಚೋದನಾತ್ಮಕವಾಗಿದೆ ಎನ್ನುವ ಮೂಲಕ ಅಭಿಜೀತ್ ಕಮೆಂಟ್ ಗಳನ್ನು ಸೋನು ಬೆಂಬಲಿಸಿದ್ದರು. ಆಡಳಿತ ಪಕ್ಷವೊಂದರ ನಾಯಕರೇ ಸೆಕ್ಸ್ ದಂಧೆ ನಡೆಸುತ್ತಿರುವ ವಿರುದ್ಧ ಯುವತಿಯೊಬ್ಬಳು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವುದು ಆಕೆಯನ್ನು ನಿಂದಿಸಲು ಹಾಗೂ “ವೇಶ್ಯೆ” ಎಂದು ಜರಿಯಲು ಪ್ರಚೋದನೆಯೇ?” ಅಂದರೆ, ಒಂದು ಕಡೆ ಬಿಜೆಪಿ ಮುಖಂಡರು ಸೆಕ್ಸ್ ಜಾಲ ನಡೆಸುತ್ತಾರೆ, ಇನ್ನೊಂದು ಕಡೆ ಅದರ ಬಗ್ಗೆ ಬೆಂಬಲಿಗರು ಅವಹೇಳನ ಮಾಡಿ ಸುಮ್ಮನಾಗಿಸುತ್ತಾರೆ.
“ಮೇ 22ರಂದು ನನ್ನ ಆಪ್ತ ಸ್ನೇಹಿತೆ ಅಭಿಜೀತ್ ನನ್ನನ್ನು ಟ್ವೀಟ್ ಮೂಲಕ ನಿಂದಿಸಿರುವ ಬಗ್ಗೆ ತಿಳಿಸಿದ್ದಳು. ನಾನು ಟ್ವಿಟ್ಟರ್ ಖಾತೆಯನ್ನು ಓಪನ್ ಮಾಡಿದ ತಕ್ಷಣ ಅಭಿಜೀತ್ ವಿರುದ್ಧ ಕಾನೂನು ಹೋರಾಟ ಮಾಡುವಂತೆ ಹಲವರು ತಿಳಿಸಿದ್ದರು. ಅಭಿಜೀತ್ ಟ್ವೀಟ್ ನಿಂದ ನಾನು ಹಾಗೂ ನನ್ನ ಕುಟುಂಬದ ಸದಸ್ಯರು ಆಘಾತಕ್ಕೊಳಗಾಗಿದ್ದೆವು”.
1.ಮುಸ್ಲಿಂ ಎನ್ನುವ ಕಾರಣಕ್ಕೆ ಹಾಗೂ ಬಿಜೆಪಿ ವಿರೋಧಿ ನಿಲುವಿಗಾಗಿ ಅಭಿಜೀತ್ ಟ್ವಿಟ್ಟರ್ ನಲ್ಲಿ ಹಲವಾರು ಮಹಿಳೆಯರನ್ನು ನಿಂದಿಸಿದ್ದರು. ಈ ಕಾರಣಕ್ಕಾಗಿಯೇ ಅವರು ಬಂಧನಕ್ಕೂ ಒಳಗಾಗಿದ್ದರು. (http://www.hindustantimes.com/…/story-OxIHiDdxHSwkYYbMvudHQ…)
2.ಮುಂಬೈನಲ್ಲಿ ನಡೆದ ದುರ್ಗಾ ಪೂಜೆಯ ಸಂದರ್ಭ ಮಹಿಳೆಯೋರ್ವರಿಗೆ ಕಿರುಕುಳ ನೀಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. (http://www.mid-day.com/…/singer-abhijeet-accused-o…/16627175)
3.ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದ ಅಭಿಜೀತ್, “ಮನೆಯಿಲ್ಲದ ಜನರು ನಾಯಿಗಳ ಹಾಗೆ, ರಸ್ತೆಯಲ್ಲಿ ಮಲಗುವವರು ನಾಯಿಗಳಂತೆ ಸಾಯಲು ಅರ್ಹರು ಎಂದಿದ್ದರು, (http://www.huffingtonpost.in/…/abhijeet-salman-verdict_n_72…)
4.ಅಭಿಜೀತ್ ಒಂದೊಮ್ಮೆ ಭಾರತವನ್ನು “ಮೂರನೆ ದರ್ಜೆಯ ರಾಷ್ಟ್ರ” ಎಂದಿದ್ದರು. (https://www.youtube.com/watch?v=OLFq6Rfb2EY)
“ಹಗರಣಗಳ ಬಗ್ಗೆ ಧ್ವನಿಯೆತ್ತುವ ನನ್ನನ್ನು ಸುಮ್ಮನಿರಿಸಬಹುದು ಎಂದುಕೊಂಡಿರುವ ಬಿಜೆಪಿಗರಿಗೆ ಸಂದೇಶವೊಂದನ್ನು ನೀಡಲು ನಾನು ನೀಡಬಯಸುತ್ತೇನೆ. “ಲೈಂಗಿಕ ಕಾರ್ಯಕರ್ತೆ” ಎಂದು ಕರೆದು ನನ್ನ ಸದ್ದಡಗಿಸುವ ಕಾರ್ಯವನ್ನು ಅವರು ನಿಲ್ಲಿಸಲಿ. ನಾನು ಲೈಂಗಿಕ ಕಾರ್ಯಕರ್ತೆಯರನ್ನು ಗೌರವಿಸುತ್ತೇನೆ. ಆದರೆ ನನ್ನ ಹೋರಾಟ ಮಕ್ಕಳು ಹಾಗೂ ಮಹಿಳೆಯರನ್ನು ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆಗೆ ದೂಡುವವರ ವಿರುದ್ಧವಾಗಿದೆ.
ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ನಿಂದನೆಗಳು ಆಕಸ್ಮಿಕವಲ್ಲ. ಅವರ ಇಡೀ ಮನಸ್ಥಿತಿಯೇ ಸ್ತ್ರೀ ವಿರೋಧಿಯಾಗಿದೆ. ಭಾರತದ ಸಂವಿಧಾನದ ಬದಲಾಗಿ ಮಹಿಳೆಯರು ಹಾಗೂ ದಲಿತರನ್ನು ಕೀಳ್ದರ್ಜೆಯವರಾಗಿ ನೋಡುವ ಸ್ತ್ರೀ ವಿರೋಧಿ ಮನುಸ್ಮೃತಿಯನ್ನು ಜಾರಿಗೆ ತರಲು ಬಿಜೆಪಿ ಯತ್ನಿಸುತ್ತಿದೆ.”
ಸಾಮಾಜಿಕ ಜಾಲತಾಣಗಳ ನಿಂದನೆಯ ಬಗ್ಗೆ ದೂರರ್ಶನಗಳಲ್ಲಿ ಚರ್ಚೆ ನಡೆಸಲು ನಾನು ನಿರಾಕರಿಸುತ್ತೇನೆ. ಏಕೆಂದರೆ ಜಾರ್ಖಂಡ್ ನಲ್ಲಿ ನಡೆದ ಹತ್ಯಾಕಾಂಡ ಹಾಗೂ ಸಹರಾನ್ಪುರದಲ್ಲಿ ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳು ಇಂದು ಚರ್ಚೆಯಾಗಬೇಕಾದ ವಿಷಯಗಳಾಗಿವೆ. ಇಷ್ಟಾಗಿಯೂ ಆನ್ ಲೈನ್ ನಿಂದನೆಯ ಬಗ್ಗೆ ಚರ್ಚೆ ನಡೆಯಲೇ ಬೇಕು ಎನ್ನುವುದಾದಲ್ಲಿ ನಲಿಯಾ ಅತ್ಯಾಚಾರ ಹಗರಣ ಹಾಗೂ ಮಧ್ಯಪ್ರದೇಶದ ಸೆಕ್ಸ್ ದಂಧೆಯ ಬಗ್ಗೆಯೂ ಚರ್ಚೆ ನಡೆಯಲಿ.” ಎಂದು ಶೆಹ್ಲಾ ರಶೀದ್ ಹೇಳಿದ್ದಾರೆ.







