ಬಾಬರಿ ಪ್ರಕರಣ:ಮೇ 30ರಂದು ಖುದ್ದಾಗಿ ಹಾಜರಾಗಲು ಅಡ್ವಾಣಿಗೆ ಕೋರ್ಟ್ ನಿರ್ದೇಶ

ಲಕ್ನೋ,ಮೇ 25: 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಳಸಂಚು ಆರೋಪಗಳ ವಿಚಾರಣೆಯನ್ನು ಎದುರಿಸುವಂತೆ ಸರ್ವೋಚ್ಚ ನ್ಯಾಯಾಲಯದಿಂದ ಆದೇಶಿಸಲ್ಪಟ್ಟಿರುವ ಎಲ್.ಕೆ.ಅಡ್ವಾಣಿ ಮತ್ತು ಕೇಂದ್ರ ಸಚಿವೆ ಉಮಾ ಭಾರತಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರಿಗೆ ಮೇ 30ರಂದು ವಿಚಾರಣಾ ನ್ಯಾಯಾಲಯದಲ್ಲಿ ಹಾಜರಿರುವಂತೆ ಲಕ್ನೋ ನ್ಯಾಯಾಲಯವು ಗುರುವಾರ ತಾಕೀತು ಮಾಡಿದೆ.
ವಿಶೇಷ ಸಿಬಿಐ ನ್ಯಾಯಾಧೀಶರು ಗುರುವಾರ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಮಾಜಿ ಶಿವಸೇನಾ ಸಂಸದ ಸತೀಶ ಪ್ರಧಾನ್ ಅವರು ಮಾತ್ರ ನ್ಯಾಯಾಲಯದಲ್ಲಿ ಹಾಜರಿದ್ದರು. ಮೇ 30ರಂದು ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಲಾಗುತ್ತಿದ್ದು, ಅಂದು ಕಡ್ಡಾಯವಾಗಿ ಹಾಜರಿರುವಂತೆ ನ್ಯಾಯಾಲಯವು ಅಡ್ವಾಣಿ ಸೇರಿದಂತೆ ಇತರ ಆರೋಪಿಗಳಿಗೆ ಆದೇಶಿಸಿತು. ಅವರು ಹಾಜರಾತಿಯಿಂದ ವಿನಾಯಿತಿ ಕೋರಲು ಅವಕಾಶ ನೀಡುವುದಿಲ್ಲ ಎಂದು ಅದು ಸ್ಪಷ್ಟಪಡಿಸಿತು.
ಕಳೆದ ತಿಂಗಳು ಅಡ್ವಾಣಿ (89) ಮತ್ತು ಇತರ ಒಂದು ಡಝನ್ ನಾಯಕರ ವಿರುದ್ಧದ ಒಳಸಂಚು ಆರೋಪಗಳಿಗೆ ಮರುಜೀವ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು, ಅವರ ವಿರುದ್ಧ ಹೊಸದಾಗಿ ಆರೋಪಗಳನ್ನು ರೂಪಿಸಲು ಲಕ್ನೋದ ವಿಶೇಷ ನ್ಯಾಯಾಲಯಕ್ಕೆ ಒಂದು ತಿಂಗಳ ಗಡುವನ್ನು ವಿಧಿಸಿತ್ತು. ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಅದು ನಿರ್ದೇಶ ನೀಡಿದೆ.
2001ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವೊಂದು ಅಡ್ವಾಣಿ ಮತ್ತು ಇತರರ ವಿರುದ್ಧದ ಒಳಸಂಚು ಆರೋಪಗಳನ್ನು ಕೈಬಿಟ್ಟಿತ್ತು ಮತ್ತು ಇದನ್ನು ಅಲಹಾಬಾದ ಉಚ್ಚ ನ್ಯಾಯಾಲಯವು 2010ರಲ್ಲಿ ಎತ್ತಿಹಿಡಿದಿತ್ತು. ಆದರೆ ಈ ನಾಯಕರು ಒಳಸಂಚು ಆರೋಪಗಳ ವಿಚಾರಣೆಯನ್ನೂ ಎದುರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ನಿರ್ಧರಿಸಿತ್ತು. 1992,ಡಿ.6ರಂದು ಮಸೀದಿಯನ್ನು ಧ್ವಂಸಗೊಳಿಸುವ ಮುನ್ನ ಅದರ ಸಮೀಪ ನಿರ್ಮಿಸಲಾಗಿದ್ದ ವೇದಿಕೆಯಿಂದ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದ ಆರೋಪದಲ್ಲಿ ವಿಚಾರಣೆಯನ್ನು ಈ ನಾಯಕರು ಈಗಾಗಲೇ ಎದುರಿಸುತ್ತಿದ್ದಾರೆ.







