ಯುವರಾಜ್ ಹಾಗು ಸುಲ್ತಾನ್ ರ ವೀರ್ಯಕ್ಕೆ ಲಕ್ಷಗಟ್ಟಲೆ ರೂ. ಬೆಲೆ !

ಕೋಟಾ,ಮೇ 25 : ಈ ಹೋರಿಯ ಹೆಸರು ಯುವರಾಜ್. ಇದು ಅಂತಿಂಥಾ ಹೋರಿಯಲ್ಲ. ಒಂದೇ ಏಟಿಗೆ ಅದು ತನ್ನ ಮಾಲಕನಿಗೆ ಬರೋಬ್ಬರಿ ರೂ 1.5 ಲಕ್ಷ ಆದಾಯ ತರಬಹುದು. ಹೇಗಂತೀರಾ ? ಈ ಯುವರಾಜನ ವೀರ್ಯಕ್ಕಿದೆ ಭಾರೀ ಬೇಡಿಕೆ. ಒಂಬತ್ತು ವರ್ಷದ ಈ ಹೋರಿ ಮುರ್ರಾ ತಳಿಗೆ ಸೇರಿದ್ದು, ದಿನವೊಂದಕ್ಕೆ 20 ಲೀಟರ್ ಹಾಲು ಸೇವಿಸುತ್ತದೆಯಲ್ಲದೆ ಈತನ ವೀರ್ಯದಿಂದ ಇಲ್ಲಿಯ ತನಕ 2 ಲಕ್ಷ ಕರುಗಳು ಹುಟ್ಟಿವೆ ಎನ್ನುತ್ತಾರೆ ಆತನ ಮಾಲಿಕ, ಕುರುಕ್ಷೇತ್ರದ ಸುನರಿಯೊ ಗ್ರಾಮದ 51 ವರ್ಷದ ಕರಮ್ ವೀರ್ ಸಿಂಗ್.
ಯುವರಾಜನಂತೆ ಸುಲ್ತಾನ್ ಕೂಡ ತನ್ನ ಮಾಲಿಕ ನರೇಶ್ ಬೆನಿವಾಲ್ ಅವರನ್ನು ಶ್ರೀಮಂತನಾಗಿಸಿದ್ದಾನೆ.
ಕೋಟಾದಲ್ಲಿ ನಡೆದ ಗ್ಲೋಬಲ್ ರಾಜಸ್ಥಾನ್ ಅಗ್ರಿಟೆಕ್ ಸಮಾವೇಶದಲ್ಲಿ ಈ ಎರಡು ಹೋರಿಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು. ಜನರು ಇಂತಹ ಹೋರಿಗಳನ್ನು ಸಾಕಿ ಅವುಗಳ ವೀರ್ಯದಿಂದ ಸಂಪಾದಿಸಬಹುದಲ್ಲದೆ ಉತ್ತಮ ತಳಿಯ ಹೋರಿಗಳ ಸಂಖ್ಯೆಯನ್ನೂ ಹೆಚ್ಚಿಸಬಹುದೆಂಬ ಸಂದೇಶ ಸಾರಲು ಈ ಹೋರಿಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.
ಕಳೆದ ವರ್ಷ ಹರ್ಯಾಣದ ಕರ್ನಲ್ ನಲ್ಲಿ ನಡೆದ ದನಗಳ ಮೇಳದಲ್ಲಿ ಯುವರಾಜನನ್ನು ರೈತರೊಬ್ಬರು ರೂ. 9 ಕೋಟಿಗೆ ಖರೀದಿಸಲು ಮುಂದೆ ಬಂದರೂ ಕರಮ್ ವೀರ್ ಸಿಂಗ್ ಅದಕ್ಕೊಪ್ಪಿರಲಿಲ್ಲ. ಈ ಹೋರಿಯನ್ನು ಆತ ಏಳು ವರ್ಷಗಳ ಹಿಂದೆ ರೂ .54,000 ಕೊಟ್ಟು ಖರೀದಿಸಿದ್ದರು,. “ಅದು ನನಗೆ ಕೋಟಿಗಟ್ಟಲೆ ಹಣ ಸಂಪಾದಿಸಿ ಕೊಟ್ಟಿದೆ, ಅದರೊಂದಿಗೆ ನನಗೆ ಭಾವನಾತ್ಮಕ ಸಂಬಂಧವೂ ಇದೆ” ಎನ್ನುತ್ತಾರೆ ಸಿಂಗ್.
ಅದೇ ರೀತಿ ಸುಲ್ತಾನನನ್ನೂ ದಕ್ಷಿಣ ಆಫ್ರಿಕಾದ ರೈತರೊಬ್ಬರು ರೂ 21 ಕೋಟಿಗೆ ಖರೀದಿಸಲು ಇಚ್ಛಿಸಿದರೂ ನರೇಶ್ ನಿರಾಕರಿಸಿದ್ದಾರೆ.
ಯುವರಾಜ 1,500 ಕೆಜಿ ತೂಗುತ್ತಿದ್ದಾನಲ್ಲದೆ ಆತ 5 ಅಡಿ ಹಾಗೂ 7 ಇಂಚು ಉದ್ದವಿದ್ದಾನೆ. ಸುಲ್ತಾನ್ 5 ಅಡಿ 11 ಇಂಚು ಉದ್ದವಿದ್ದು ಎರಡೂ ಪ್ರಾಣಿಗಳು ಕ್ರಮವಾಗಿ 24 ಹಾಗೂ ಆರು ಬಾರಿ ನ್ಯಾಷನಲ್ ಲೈವ್ ಸ್ಟಾಕ್ ಚಾಂಪಿಯನ್ನುಗಳಾಗಿವೆ.
ಈ ಹೋರಿಗಳು ಒಮ್ಮೆ ವೀರ್ಯಸ್ಖಲನ ಮಾಡಿದಾಗ 6 ಮಿಲಿಲೀಟರ್ ವೀರ್ಯ ನೀಡುತ್ತವೆಯಲ್ಲದೆ ಇದರಿಂದ 600 ಡೋಸ್ ತಯಾರಿಸಬಹುದು. ಪ್ರತಿ ಡೋಸ್ ಬೆಲೆ ರೂ .250 ಆಗಿದೆ. ಯುವರಾಜ ಪ್ರತಿ ವರ್ಷ 45,000 ಡೋಸ್ ವೀರ್ಯ ಉತ್ಪಾದಿಸುತ್ತಿದ್ದರೆ, ಸುಲ್ತಾನ್ 54,000 ಡೋಸ್ ವೀರ್ಯ ಒದಗಿಸುತ್ತಿದ್ದಾನೆ.
ಅವುಗಳ ವಾರ್ಷಿಕ ನಿರ್ವಹಣೆಗೆ ರೂ. 2 ಲಕ್ಷ ವೆಚ್ಚ ಮಾಡಲಾಗುತ್ತಿದೆ.








