ಆ್ಯಸಿಡ್ ಸಂತ್ರಸ್ತೆಗೆ ಮನೆ ಕೊಡುಗೆ ನೀಡಿದ ವಿವೇಕ್ ಒಬೆರಾಯ್

ಮುಂಬೈ,ಮೇ 25: ತನ್ನ ಮಾನವೀಯ ಕಾರ್ಯಗಳಿಗಾಗಿ ಹೆಸರಾಗಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ಈ ಬಾರಿ ಆ್ಯಸಿಡ್ ದಾಳಿಗೊಳಗಾಗಿ ಬದುಕುಳಿದಿರುವ ಲಲಿತಾ ಬೇನ್‌ಬನ್ಸಿಗೆ ಮದುವೆಯ ಉಡುಗೊರೆಯಾಗಿ ಥಾಣೆಯಲ್ಲಿ ಫ್ಲಾಟೊಂದನ್ನು ನೀಡಿದ್ದಾರೆ.
ಥಾಣೆ ಸಮೀಪದ ಕಲ್ವಾ ನಿವಾಸಿ ಲಲಿತಾಳ ಮದುವೆ ಬೇರೊಬ್ಬ ವ್ಯಕ್ತಿಯೊಂದಿಗೆ 2012ರಲ್ಲಿ ನಡೆಯಲಿತ್ತು. ಆದರೆ ಆಕೆಯ ಸೋದರ ಸಂಬಂಧಿಗಳು ವೈಯಕ್ತಿಕ ದ್ವೇಷದಿಂದ ಆಕೆಯ ಮೇಲೆ ದಾಳಿ ನಡೆಸಿದ್ದು, ಆ ಮದುವೆ ರದ್ದಾಗಿತ್ತು. ಲಲಿತಾಳ ಮುಖ ಸಂಪೂರ್ಣ ಸುಟ್ಟುಹೋಗಿದ್ದು, 17 ಬಾರಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಗೊಳಗಾಗಿದ್ದಳು.
ಕಳೆದ ಮಾರ್ಚ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಲಲಿತಾಳನ್ನು ಭೇಟಿಯಾಗಿ ಆಕೆಯ ಸಮಸ್ಯೆಗಳನ್ನು ತಿಳಿದುಕೊಂಡಿದ್ದ ಒಬೆರಾಯ್ ಆಕೆಗೆ ವಾಸಿಸಲು ಸ್ವಂತದ ಸೂರೂ ಇಲ್ಲವೆನ್ನುವದನ್ನು ಅರಿತು ಬೇಸರಿಸಿಕೊಂಡಿದ್ದರು. ಮನೆಯೊಂದನ್ನು ಉಡುಗೊರೆಯಾಗಿ ನೀಡುವುದಾಗಿ ಆಗ ಅವರು ಆಕೆಗೆ ಭರವಸೆ ನೀಡಿದ್ದರು. ಇತ್ತೀಚಿಗೆ ಮೆಚ್ಚಿದ ಯುವಕ ರಾಹುಲ್ ಜೊತೆ ಲಲಿತಾಳ ಮದುವೆ ನಡೆದಿದ್ದು, ಸಮಾರಂಭದಲ್ಲಿ ಭಾಗಿಯಾಗಿದ್ದ ಒಬೆರಾಯ್ ತನ್ನ ಮಾತಿನಂತೆ ಹೊಸ ಫ್ಲಾಟ್ ಉಡುಗೊರೆಯಾಗಿ ನೀಡಿದ್ದಾರೆ. ಅದರ ಚಾವಿಯನ್ನೂ ಒಪ್ಪಿಸಿದ್ದಾರೆ.
ಲಲಿತಾ ನಿಜಕ್ಕೂ ಹಿರೋ ಆಗಿದ್ದಾಳೆ. ಸಾಮಾನ್ಯ ಮಾನವರಂತೆ ತಮ್ಮ ಬದುಕನ್ನು ಸಾಗಿಸಬಹುದೆಂಬ ಹೊಸ ಭರವಸೆಯನ್ನು ಆಕೆ ಸಾವಿರಾರು ಆ್ಯಸಿಡ್ ದಾಳಿ ಸಂತ್ರಸ್ತರಲ್ಲಿ ಮೂಡಿಸಿದ್ದಾಳೆ ಎಂದು ಒಬೆರಾಯ್ ಪ್ರಶಂಸಿಸಿದ್ದಾರೆ.
ಅಂದ ಹಾಗೆ ಲಲಿತಾ ಮದುವೆಗೆ ನಾಂದಿ ಹಾಡಿದ್ದು ರಾಂಗ್‌ನಂಬರ್ ಕರೆ. ಅದೊಂದು ದಿನ ರಾಹುಲ್ ಮಾಡಿದ್ದ ಕರೆ ತಪ್ಪಿ ಲಲಿತಾಗೆ ಬಂದಿತ್ತು. ಅದು ಅವರಿಬ್ಬರ ನಡುವೆ ಪರಿಚಯಕ್ಕೆ ಕಾರಣವಾಗಿ ಪರಸ್ಪರ ಪ್ರೇಮಿಸುತ್ತಿದ್ದರು. ಲಲಿತಾ ಆ್ಯಸಿಡ್ ದಾಳಿಯ ಸಂತ್ರಸ್ತೆಯಾಗಿದ್ದಾಳೆ ಮತ್ತು ತನ್ನ ರೂಪವನ್ನೇ ಕಳೆದುಕೊಂಡಿದ್ದಾಳೆ ಎನ್ನುವುದು ಗೊತ್ತಾದಾಗಲೂ ರಾಹುಲ್ ಆಕೆಯನ್ನು ಬಿಡಲಿಲ್ಲ. ಮೊನ್ನೆ ಮೊನ್ನೆ ಅವರಿಬ್ಬರ ಮದುವೆ ತುಂಬ ಸಂಭ್ರಮದಿಂದಲೇ ನಡೆದಿದೆ.

Amazng luv stry of my lil sistr Lalita Bansi,an acid attack survivor,gt married 2day 2 n amazng man Ravi Shankar who luvs her fr who she is! pic.twitter.com/Pt4gLh0ASn
— Vivek Anand Oberoi (@vivek_oberoi) May 23, 2017
Lalita is a true hero cz she proves 2 1000s of acid attck survivors nationwide tht this isnt a full stp,jst a comma,lyf hs mny possibilities pic.twitter.com/tNvooXfIE1
— Vivek Anand Oberoi (@vivek_oberoi) May 23, 2017







