ಭೀಕರ ರಸ್ತೆ ಅಪಘಾತ: ನವವಧು ಸೇರಿದಂತೆ 8 ಜನರು ಮೃತ್ಯು
25 ಮಂದಿಗೆ ಗಂಭೀರ ಗಾಯ

ಭಟ್ಕಳ, ಮೇ 25: ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ.66ರಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಧು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರುಕ್ಮಿಣಿ (65) ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 8ಕ್ಕೇರಿದೆ.
ಗುರುವಾರ ಮಂಗಳೂರಿನಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಸಿರ್ಸಿ ತಾಲೂಕಿನ ದಾಸನಕೊಪ್ಪ ಗ್ರಾಮದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಮದುವೆ ದಿಬ್ಬಣದ ಟೆಂಪೋವೊಂದು ಪರಸ್ಪರ ಢಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಬಸ್ ಚಾಲಕ ಉಮೇಶ್ ವಾಲ್ಮಿಕಿ(35) ಟೆಂಪೋದಲ್ಲಿದ್ದ ಪಾಲಾಕ್ಷಿ (42), ಬೇಬಿ (38) ಸುಬ್ರಹ್ಮಣ್ಯ (15), ದಿವ್ಯಾ ಕುರ್ಡೇಕರ್ (23), ಟೆಂಪೋ ಚಾಲಕ ನಾಗಪ್ಪ ಗಣಿಗಾರ್ (46) ಹಾಗೂ ರುಕ್ಮಿಣಿ (65) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮಣಿಪಾಲ, ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಭಟ್ಕಳದ ತಾಲೂಕು ಆಸ್ಪತ್ರೆಗೆ ಹಾಗೂ ಮುರಡೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಭಟ್ಕಳ ಡಿವೈಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







