ಬಿಜೆಪಿ ಕುಂಪಲ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ಕನ್ನಡಕ ವಿತರಣೆ

ಉಳ್ಳಾಲ,ಮೇ 25 : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅಯೋಜಿಸಲಾಗಿದ್ದ ಕಾರ್ಯಕ್ರಮದ ಪ್ರಯುಕ್ತ ಕನ್ನಡಕ ವಿತರಿಸಲಾಗಿದ್ದು ಈ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.
10 ದಿನಗಳ ಹಿಂದೆ ಭಾರತೀಯ ಜನತಾ ಪಕ್ಷದ ಕುಂಪಲ ಬೂತ್ ಸಮಿತಿಯಿಂದ ಕುಂಪಲ ಮೂರುಕಟ್ಟೆಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ‘ಜನ್ಮಶತಾಬ್ದಿ ಪ್ರಯುಕ್ತ’ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆಯ ಫಲಾನುಭವಿಗಳಿಗೆ ಗುರುವಾರ ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಕನ್ನಡಕ ವಿತರಿಸಿ ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಅವರು ಪಕ್ಷದಲ್ಲಿ ಓರ್ವ ಸೇವಕರಾಗಿ ಕೆಲಸ ಮಾಡಿದ್ದರು, ಅವರ ಜನ್ಮ ಶತಾಬ್ಧಿ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ನೆಲೆಯಲ್ಲಿ ಕೇವಲ ಸಮಾವೇಶಕ್ಕೆ ಆದ್ಯತೆ ನೀಡದೆ, ಸಾರ್ವಜನಿಕವಾಗಿ ಆರೋಗ್ಯ ತಪಾಸಣೆ, ಪುಸ್ತಕ ವಿತರಣೆ ಮೂಲಕ ನಡೆಸಲಾಗಿದ್ದು ಕಣ್ಣಿನ ಸಮಸ್ಯೆಯಿರುವವರಿಗೆ ಬೆಳಕಾಗುವ ನಿಟ್ಟಿನಲ್ಲಿ ಕನ್ನಡಕಗಳನ್ನೂ ವಿತರಿಸಲಾಗುತ್ತಿದೆ ಎಂದರು.
ಕಣಚೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು.ಕೆ.ಮೋನು ಮಾತನಾಡಿ, ನಮ್ಮ ಆಸ್ಪತ್ರೆ ಸದಾ ಜನಸಾಮಾನ್ಯರು ಹಾಗೂ ಬಡ ವರ್ಗದ ಆರೋಗ್ಯ ಕಾಳಜಿ ಹೊಂದಿದೆ, ಉತ್ತಮ ವೈದ್ಯರ ತಂಡವಿದ್ದು ಯಾವುದೇ ಸಮಯದಲ್ಲೂ ಗುಣಮಟ್ಟದ ಸೇವೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ಸದಸ್ಯ ಹರೀಶ್ ಉಚ್ಚಿಲ, ಮಾಧವ ಬಗಂಬಿಲ, ಬಿಜೆಪಿ ಕುಂಪಲ ಬೂತ್ ಅಧ್ಯಕ್ಷ ಮೋಹನ್ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಗೋಪಿನಾಥ್ ಬಗಂಬಿಲ ಮೊದಲಾದವರು ಉಪಸ್ಥಿತರಿದ್ದರು.
ದಯಾನಂದ ತೊಕ್ಕೊಟ್ಟು ವಂದಿಸಿದರು.







