ಗೋರಕ್ಷಕ ಗುಂಪುಗಳಿಗೂ ಬಿಜೆಪಿಗೂ ತಳುಕು ಹಾಕುವುದು ಯುಕ್ತವಲ್ಲ:ಗಡ್ಕರಿ

ಹೊಸದಿಲ್ಲಿ,ಮೇ 25: ಬಿಜೆಪಿಯು ಗೋರಕ್ಷಕ ಗುಂಪುಗಳನ್ನು ಬೆಂಬಲಿಸುವುದಿಲ್ಲ, ಆದ್ದರಿಂದ ಅವುಗಳಿಗೂ ಪಕ್ಷಕ್ಕೂ ನಂಟು ಕಲ್ಪಿಸುವುದು ಯುಕ್ತವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಇಲ್ಲಿ ಹೇಳಿದರು. ಇದೇ ವೇಳೆ ಸರಕಾರದ ಅಭಿವೃದ್ಧಿ ಕಾರ್ಯಸೂಚಿಯನ್ನು ಅವರು ಸಮರ್ಥಿಸಿಕೊಂಡರು.
ಸರಕಾರವು ‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ’ಎಂಬ ಧ್ಯೇಯವಾಕ್ಯವನ್ನು ಮುಖ್ಯವಾಗಿಟ್ಟುಕೊಂಡಿದೆ ಮತ್ತು ಅದರ ನೀತಿಗಳು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಯಾವುದೇ ತಾರತಮ್ಯವನ್ನು ಮಾಡಿಲ್ಲ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗಡ್ಕರಿ ಹೇಳಿದರು.
ಟಿವಿಯಲ್ಲಿ ಕೇಸರಿ ಬಟ್ಟೆ ಧರಿಸಿರುವ ಯಾವುದೇ ವ್ಯಕ್ತಿಯನ್ನು ತಕ್ಷಣವೇ ಬಿಜೆಪಿ ಯೊಂದಿಗೆ ಗಂಟು ಹಾಕಲಾಗುತ್ತದೆ. ವಾಸ್ತವದಲ್ಲಿ ನಾವು(ಬಿಜೆಪಿ) ಆ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವನ್ನೇ ಹೊಂದಿರುವುದಿಲ್ಲ. ಅಂತಹವರನ್ನು ನಾವು ಬೆಂಬಲಿಸುವುದಿಲ್ಲ ಎಂದರು.
ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರಗಳು ನಡೆಯಬಾರದಿತ್ತು ಎಂದ ಅವರು, ಇದು ನಮ್ಮ ಅಜೆಂಡಾ ಅಲ್ಲ. ಇದನ್ನು ಮಾಡುತ್ತಿರುವವರು ನಮ್ಮ ಜನರಲ್ಲ. ಇದನ್ನು ಮಾಡಿದವರು ತಪ್ಪೆಸಗಿದ್ದಾರೆ. ನಾವು ಅವರ ಜೊತೆಯಲ್ಲಿಲ್ಲ ಎಂದು ಹೇಳಿದರು.
ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವವರನ್ನು ಪ್ರಧಾನಿಗಳು ಖಂಡಿಸಿ ದ್ದಾರೆ. ಇಂತಹ ಹಿಂಸೆಯನ್ನು ನಾವೂ ಖಂಡಿಸಿದ್ದೇವೆ. ಹೀಗಿರುವಾಗ ಅವರಿಗೂ ನಮಗೂ ನಂಟು ಕಲ್ಪಿಸುವುದು ಏಕೆ ಎಂದು ಅವರು ಪ್ರಶ್ನಿಸಿದರು.
ಇಂತಹ ಗುಂಪುಗಳಿಗೂ ಬಿಜೆಪಿಗೂ ನಂಟು ಕಲ್ಪಿಸುವುದು ಯುಕ್ತವಲ್ಲ ಎಂದ ಅವರು, ಇದು ಬಿಜೆಪಿಯ ಹೆಸರು ಕೆಡಿಸಲು ಮತ್ತು ಅದನ್ನು ಅಲ್ಪಸಂಖ್ಯಾತರ ವಿರೋಧಿ ಹಾಗೂ ದಲಿತರ ವಿರೋಧಿ ಎಂದು ಬಿಂಬಿಸಲು ಎಡಪಂಥೀಯರು ನಡೆಸುತ್ತಿರುವ ಪ್ರಚಾರ ಅಭಿಯಾನದ ಭಾಗವಾಗಿದೆ ಎಂದು ಆರೋಪಿಸಿದರು.
ಬಿಜೆಪಿ, ವಿಹಿಂಪ, ಸಂಘ ಪರಿವಾರ ಮತ್ತು ನಮ್ಮ ಸರಕಾರ ಇಂತಹ ಶಕ್ತಿಗಳನ್ನು ಬೆಂಬಲಿಸುವುದಿಲ್ಲ ಎಂದ ಅವರು, ಆದರೆ ತನ್ನ ಪಕ್ಷವು ಗೋಹತ್ಯೆಯ ವಿರುದ್ಧವಾಗಿದೆ ಎಂದರು. ಇವೆಲ್ಲ ನಂಬಿಕೆಯ ವಿಷಯಗಳು ಮತ್ತು ಚಿಕಿತ್ಸಾ ದೃಷ್ಟಿಯಿಂದ ಗೋಮೂತ್ರ ಅರ್ಕ್ ಅನ್ನು ತಾನೂ ಸೇವಿಸುತ್ತಿದ್ದೇನೆ ಎಂದರು.







