ಎ.ಜೆ. ಆಸ್ಪತ್ರೆಯಲ್ಲಿ ಚೀನಿ ಪ್ರಜೆಯ ಬೆರಳು ಮರುಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿ

ಮಂಗಳೂರು, ಮೇ 25: ಆಳ ಸಮುದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ನಡೆದ ಅವಘಡದಲ್ಲಿ ತೋರು ಬೆರಳು ತುಂಡರಿಸಲ್ಪಟ್ಟಿದ್ದ ಚೀನಿ ಪ್ರಜೆಗೆ ಎ.ಜೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಯಶಸ್ವಿಯಾಗಿ ಬೆರಳನ್ನು ಮರುಜೋಡಿಸಲಾಗಿದೆ.
ಚೀನಿ ಹಡಗಿನಲ್ಲಿದ್ದ ಸಿಬ್ಬಂದಿ ಹಾಂಗ್ ಜಿಯಾಂಗ್ಯು ಅಪಾಯದಲ್ಲಿದ್ದಾಗ ಅವರನ್ನು ರಕ್ಷಿಸಿದ್ದ ಕರಾವಳಿ ಕಾವಲು ಪಡೆ, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ತುರ್ತುಚಿಕಿತ್ಸಾ ವಿಭಾಗಕ್ಕೆ ಅವರನ್ನು ದಾಖಲಿಸಿತ್ತು. ಜಿಯಾಂಗ್ಯುರ ತೋರು ಬೆರಳು ಭಾಗಶಃ ತುಂಡರಿಸಲ್ಪಟ್ಟಿದ್ದು, ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಈ ಸಂದರ್ಭ ಡಾ. ಸನತ್ ಭಂಡಾರಿ, ಡಾ. ದಿನೇಶ್ ಕದಂ ಮತ್ತು ಡಾ. ಗೌತಮ್ ಶೆಟ್ಟಿಯವರ ನೇತೃತ್ವದಲ್ಲಿ ಮುರಿದ ಮೂಳೆಯ ಜೊತೆ ಸ್ನಾಯುರಜ್ಜುವಿನ ಮರುಜೋಡಣೆ ಮತ್ತು ಮೈಕ್ರೋವ್ಯಾಸ್ಕುಲರ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಜಿಯಾಂಗ್ಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅವರು ಸ್ವದೇಶಕ್ಕೆ ತೆರಳಿದ್ದಾರೆ.
ಕೆಲಸದ ಸಮಯದಲ್ಲಿ ಕೈಗಳಿಗೆ ಗಾಯಗಳಾಗುವುದು, ಅಪಘಾತಗಳಿಂದ ಅಂಗಗಳು ಮುರಿತಕ್ಕೊಳಗಾಗುವುದರಿಂದ ತೀವ್ರ ಅಸಮರ್ಥತೆಗೆ ಮತ್ತು ಅಂಗವೈಕಲ್ಯ ಉಂಟಾಗುತ್ತದೆ. ಅಂಗಚ್ಛೇದನದಿಂದ ಬೇರ್ಪಟ್ಟ ಭಾಗವನ್ನು ಶುದ್ಧವಾದ ಪಾಲಿಥೀನ್ ಚೀಲದಲ್ಲಿ ಸಂಗ್ರಹಿಸಿ ಬಿಗಿಯಾಗಿ ಕಟ್ಟಿ ಆ ಚೀಲವನ್ನು ಮಂಜುಗಡ್ಡೆ ಹಾಕಿದ/ಶೀತಲೀಕರಿಸಿದ ನೀರಿನಲ್ಲಿಟ್ಟು ಶೀಘ್ರವಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು ಎಂದು ಎ.ಜೆ. ಆಸ್ಪತ್ರೆ ಪ್ರಕಟನೆಯಲ್ಲಿ ತಿಳಿಸಿದೆ.







