ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆದರೆ ಅಚ್ಚರಿಯಿಲ್ಲ: ಬಿಜೆಪಿ ನಾಯಕ ಏಕನಾಥ್ ಕಾಡ್ಸೆ

ಮುಂಬೈ,ಮೇ 25: ಲೋಕಸಭೆ, ವಿಧಾನಸಭೆಗಳಿಗೆ ಜೊತೆಯಲ್ಲಿಮಧ್ಯಂತರ ಚುನಾವಣೆ ನಡೆದರೆ ಆಶ್ಚರ್ಯವಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಏಕನಾಥ್ ಕಾಡ್ಸೆ ಹೇಳಿದ್ದಾರೆ. ಮಧ್ಯಂತರ ಚುನಾವಣೆಯನ್ನು ಎದುರಿಸಲು ಸಿದ್ಧರಾಗಿರಿ ಎಂದು ಅವರು ತನ್ನ ಬೆಂಬಲಿಗರಿಗೆ ಸೂಚಿಸಿದ್ದಾರೆ. ಧೂಲೆ ಜಿಲ್ಲೆಯಲ್ಲಿ ಪಕ್ಷದ ಸಭೆಯಲ್ಲಿ ಮಧ್ಯಾಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಚಿವ ಸ್ಥಾನದಿಂದ ತೆಗೆದ ಬಳಿಕ ತನ್ನನ್ನು ದೂರ ಇಟ್ಟಿರುವ ಪಕ್ಷದ ನಾಯಕರ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರ ವಿರುದ್ಧ ಕಾಡ್ಸೆ ಬಾಣಬಿಟ್ಟಿದ್ದು, ಗಮನಾರ್ಹ ಯೋಜನೆಗಳನ್ನು ರೂಪಿಸಿದರೂ ಅದನ್ನು ಜನರೆಡೆಗೆ ತಲುಪಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಭೂಗತಜಗತ್ತಿನ ನಾಯಕ ದಾವೂದ್ ಇಬ್ರಾಹೀಂನೊಂದಿಗೆ ಸಂಬಂಧ ಹೊಂದಿದ್ದಾರೆ ಹಾಗೂ ಭ್ರಷ್ಟಾಚಾರ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಕಾಡ್ಸೆ ರಾಜಿನಾಮೆ ನೀಡಿದ್ದರು. ಮುಖ್ಯಮಂತ್ರಿಯಾಗುವ ಅರ್ಹತೆಯಿರುವ ಕಾಡ್ಸೆಯನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎನ್ನುವ ಆಕ್ರೋಶ ಕಾಡ್ಸೆ ಬೆಂಬಲಿಗರಲ್ಲಿದೆ.





