ವಿದ್ಯಾರ್ಥಿಗಳ ನಡುವಿನ ಘರ್ಷಣೆಯ ಹಿನ್ನಲೆ :ಪುತ್ತೂರಲ್ಲಿ ಪಿ.ಜಿ.ಗಳ ಮಾಹಿತಿ ನೀಡುವಂತೆ ಪೊಲೀಸರ ಸೂಚನೆ

ಪುತ್ತೂರು,ಮೇ 25: ಪುತ್ತೂರು ವ್ಯಾಪ್ತಿಯ ಕಾಲೇಜು ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಪಿ.ಜಿ.ಗಳೇ ಕಾರಣ ಎನ್ನುವ ತೀರ್ಮಾನಕ್ಕೆ ಬಂದಿರುವ ಪೊಲೀಸರು ಪಿ.ಜಿ.ಗಳ ಮಾಹಿತಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದಾರೆ. ಪಿ.ಜಿಗಳನ್ನು ನಡೆಸುತ್ತಿರುವವರು ತಮ್ಮ ಪಿ.ಜಿ.ಗಳ ವಿಳಾಸ ಮಾಹಿತಿಯನ್ನು 10 ದಿನಗಳೊಳಗೆ ಪೊಲೀಸ್ ಠಾಣೆಗೆ ನೀಡುವಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರು ಸೂಚನೆ ನೀಡಿದ್ದಾರೆ.
ಪುತ್ತೂರಿನಲ್ಲಿರುವ ಹೆಚ್ಚಿನ ಪಿ.ಜಿಗಳಲ್ಲಿ ಸೂಕ್ತ ಭದ್ರತೆಯ ವ್ಯವಸ್ಥೆಗಳಿಲ್ಲದ ಕಾರಣ ಹತೋಟಿಯಲ್ಲಿಟ್ಟುಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಪುತ್ತೂರಿನ ಕಾಲೇಜು ಪರಿಸರದಲ್ಲಿರುವ ಪಿ.ಜಿಗಳ ಸಂಖ್ಯೆ, ಅಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ಪಿ.ಜಿ.ಗಳಲ್ಲಿದ್ದುಕೊಂಡು ಉದ್ಯೋಗಕ್ಕೆ ತೆರಳುತ್ತಿರುವ ಅವಿವಾಹಿತರ ವಿವರ ಸಂಗ್ರಹಿಸುವ ಜೊತೆಗೆ ಪುತ್ತೂರು ವ್ಯಾಪ್ತಿಯಲ್ಲಿ ಪ್ರಸ್ತುತವಿರುವ ಪಿ.ಜಿಗಳು ನಗರಸಭೆಯಿಂದ ಪರವಾನಿಗೆ ಪಡೆದುಕೊಂಡಿರುವ ಅಧಿಕೃತ ಪಿ.ಜಿ.ಗಳೇ ಇಲ್ಲಾ ಅನಧಿಕೃತವಾಗಿ ನಡೆಯುತ್ತಿವೆಯೇ ಎಂಬುವುದನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಯಾರಲ್ಲೂ ಮಾಹಿತಿ ಇಲ್ಲ:
ಪುತ್ತೂರು ವ್ಯಾಪ್ತಿಯಲ್ಲಿರುವ ಪಿ.ಜಿಗಳ ಕುರಿತು ಸರಿಯಾದ ಮಾಹಿತಿ ಯಾರಲ್ಲೂ, ಯಾವ ಇಲಾಖೆಯಲ್ಲಿಯೂ ಇಲ್ಲ. ಕೆಲವೊಂದು ಪಿ.ಜಿಗಳಲ್ಲಿ ವಾಸ್ತವ್ಯ ಇರುವವರ ಅತಿರೇಕದ ವರ್ತನೆಯಿಂದಾಗಿ ರಾತ್ರಿ ವೇಳೆ ಸ್ಥಳೀಯರಿಗೆ ಕಿರಿಕಿರಿ ಉಂಟಾಗುವ ದೂರುಗಳು ಬರುತ್ತಿವೆ.
ಪೊಲೀಸರಿಗೆ ದೂರು ನೀಡಿದ ಬಳಿಕವಷ್ಟೇ ಅಲ್ಲೊಂದು ಪಿ.ಜಿ.ಇದೆ ಎನ್ನುವುದು ತಿಳಿಯುತ್ತಿದ್ದು, ನಗರಸಭೆಯಿಂದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಪಿ.ಜಿ ನಡೆಸಿಕೊಂಡು ಹೋಗುವವರು ಹಲವರಿದ್ದಾರೆ. ಅಲ್ಲಿ ತಂಗುವವರಿಗೆ ಸೂಕ್ತ ಭದ್ರತೆ, ಸರಿಯಾದ ವಸತಿ ವ್ಯವಸ್ಥೆ, ಆಹಾರ ವ್ಯವಸ್ಥೆ ಇಲ್ಲ. ಹಲವು ಕಡೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಸಣ್ಣಪುಟ್ಟ ಕಟ್ಟಡವನ್ನೂ ಪಿ.ಜಿಯನ್ನಾಗಿ ಪರಿವರ್ತಿಸಿರುವುದು ಕಂಡು ಬಂದಿದೆ. ಇಲ್ಲಿನ ಪಿ.ಜಿ.ಗಳಲ್ಲಿದ್ದುಕೊಂಡು ಕಾಲೇಜು ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಪಿ.ಜಿಯನ್ನು ಬಿಡದೆ ಇಲ್ಲಿಂದಲೇ ಮುಂದಿನ ಶಿಕ್ಷಣಕ್ಕೆ ಮಂಗಳೂರಿಗೆ ಹೋಗಿ ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಈಗಾಗಲೇ ಕಲೆಹಾಕಿದ್ದಾರೆ.
ಭದ್ರತೆಯ ದೃಷ್ಟಿಯಿಂದ ,ಅದರಲ್ಲೂ ಮುಖ್ಯವಾಗಿ ಮಹಿಳೆಯರ ಪಿ.ಜಿಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ಪಿ.ಜಿಗಳಿಗೆ ಭೇಟಿಯಿತ್ತು ಹೋಗುವವರ ಮಾಹಿತಿಯನ್ನು ಮಾಲಕರು ದಾಖಲೀಕರಿಸಿರಬೇಕು. ತಿಂಗಳಿಗೊಮ್ಮೆ ಮಾಲಕರ ಸಭೆ ನಡೆಸಬೇಕು. ವಿಶೇಷವಾಗಿ ಮಹಿಳಾ ಪಿ.ಜಿ.ಗಳಲ್ಲಿ ಇರುವ ಮಹಿಳೆಯರ ಸಂಖ್ಯೆ, ಅವರ ಅರ್ಜಿ ಫಾರಂಗಳು, ವಿಳಾಸ ಪಿ.ಜಿ. ಮಾಲೀಕರಲ್ಲಿ ಕಡ್ಡಾಯವಾಗಿ ಇರಬೇಕು.ಜತೆಗೆ ಪಿ.ಜಿ. ಮಾಲೀಕರ ಹಾಗೂ ವಾರ್ಡನ್, ವಾಚ್‌ಮೆನ್‌ನ ವಿಳಾಸ, ಅವರ ಫೋನ್ ನಂಬರ್‌ನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರಬೇಕು. ಪ್ರತಿ ಪಿ.ಜಿ.ಯಲ್ಲಿಯೂ ಕಟ್ಟಡದ ಎದುರು ಮತ್ತು ಹಿಂದೆ ಒಂದು ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಇಲಾಖೆಯ ನಿರ್ದೇಶನವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಎನ್‌ಒಸಿ ಅಗತ್ಯ
ಪುತ್ತೂರಿನ ಕಾಲೇಜು ಪರಿಸರಗಳಲ್ಲಿ ಅನಧಿಕೃತವಾಗಿ ಮತ್ತು ಸುರಕ್ಷತೆ ಇಲ್ಲದ ಕಟ್ಟಡಗಳಲ್ಲಿಯೂ ಪಿ.ಜಿಗಳು ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪಿ.ಜಿ ನಡೆಸುವ ಮಾಲಕರು ಪಿ.ಜಿಗಳಿಗೆ ನಗರಸಭೆಯಿಂದ ಪರವಾನಿಗೆ ಪಡೆಯುವ ಮುನ್ನ ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ಪಡೆದುಕೊಳ್ಳಬೇಕು ಎಂದು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯ ನಿರಾಪೇಕ್ಷಣಾ ಪತ್ರ ಪಡೆದವರಿಗೆ ಮಾತ್ರ ಅನುಮತಿ ನೀಡುವಂತೆ ನಗರಸಭೆಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಾಹಿತಿ ನೀಡಿ ಸಹಕರಿಸಿ
ಪುತ್ತೂರು ನಗರ ವ್ಯಾಪ್ತಿಯಲ್ಲಿ ಅನಧಿಕೃತ ಪಿ.ಜಿ.ಗಳಿದ್ದಲ್ಲಿ, ಅಧಿಕೃತ ಪಿ.ಜಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದಲ್ಲಿ ಅಥವಾ ಪಿ.ಜಿ.ಗಳಲ್ಲಿ ವಾಸ್ತವ್ಯ ಇರುವವರಿಗೆ ತೊಂದರೆ, ಕಿರುಕುಳ ಉಂಟಾಗುತ್ತಿದ್ದಲ್ಲಿ ವ್ಯಾಟ್ಸಾಪ್ ನಂ. 9480805361ಗೆ ಮಾಹಿತಿಯನ್ನು ಕಳುಹಿಸಿಕೊಡಿ. ಅನಧಿಕೃತ ಪಿ.ಜಿಗಳ ಭಾವಚಿತ್ರವನ್ನೂ ಕೂಡಾ ಕಳುಹಿಸಿಕೊಡಬಹುದು.ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿರಿಸಲಾಗುವುದು ಎಂದು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.