ಮ್ಯಾಂಚೆಸ್ಟರ್ ದಾಳಿ ಮಾಹಿತಿ ಅಮೆರಿಕದಿಂದ ಸೋರಿಕೆ: ಬ್ರಿಟನ್ ಕೆಂಡ

ಲಂಡನ್, ಮೇ 25: ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಮೆರಿಕದ ಭದ್ರತಾ ಸಂಸ್ಥೆಗಳು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದಕ್ಕೆ ಬ್ರಿಟನ್ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಬೆನ್ನಿಗೇ, ಅಮೆರಿಕದ ಭದ್ರತಾ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ನಿಲ್ಲಿಸಿದ್ದಾರೆ. ಈ ಮಾಹಿತಿ ಸೋರಿಕೆಯು ಭಯೋತ್ಪಾದಕ ದಾಳಿ ಕುರಿತ ತನಿಖೆಯನ್ನು ದುರ್ಬಲಗೊಳಿಸಿರುವ ಸಾಧ್ಯತೆಯಿದೆ ಎಂದು ಬ್ರಿಟನ್ ಪೊಲೀಸರು ಭೀತಿಪಟ್ಟಿದ್ದಾರೆ.
ಗುರುವಾರ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ನ್ಯಾಟೊ ಶೃಂಗ ಸಮ್ಮೇಳನದಲ್ಲಿ ಬ್ರಿಟನ್ ಪ್ರಧಾನಿ ತೆರೇಸಾ ಮೇ ಈ ವಿಷಯವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ಪ್ರಸ್ತಾಪಿಸುವ ನಿರೀಕ್ಷೆಯಿದೆ.
‘ದ ನ್ಯೂಯಾರ್ಕ್ ಟೈಮ್ಸ್’ ಮತ್ತು ಇತರ ಅಮೆರಿಕನ್ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸೊರಿಕೆ ಮಾಹಿತಿಗಳನ್ನು ಬ್ರಿಟಿಶ್ ಸುದ್ದಿ ಮಾಧ್ಯಮಗಳು ಮರುಪ್ರಕಟಿಸಿವೆ.
ಈ ಬಗ್ಗೆ ಅಮೆರಿಕದ ಉಸ್ತುವಾರಿ ರಾಯಭಾರಿಗೆ ದೂರು ನೀಡಿರುವುದಾಗಿ ಮ್ಯಾಂಚೆಸ್ಟರ್ ಮೇಯರ್ ಆ್ಯಂಡಿ ಬರ್ನಮ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಅಮೆರಿಕದಿಂದ ಆಗುತ್ತಿರುವ ಸೋರಿಕೆಯನ್ನು ನಿಲ್ಲಿಸುವ ಭರವಸೆ ತನಗೆ ಸಿಕ್ಕಿದೆ ಎಂದು ಅವರು ಹೇಳಿದರು.
ಗುಪ್ತಚರ ಮಾಹಿತಿ ಹಂಚಿಕೆಯಲ್ಲಿ ಅಮೆರಿಕ ಮತ್ತು ಬ್ರಿಟನ್ ನಡುವೆ ಇರುವ ‘ವಿಶೇಷ ಬಾಂಧವ್ಯ’ ಇದರಿಂದ ಸಾಬೀತಾಗಿದೆ.
ಶಂಕಿತ ಪ್ಯಾಕೆಟ್ ಸೃಷ್ಟಿಸಿದ ಬಾಂಬ್ ಭೀತಿ
ಮ್ಯಾಂಚೆಸ್ಟರ್‌ನ ಕಾಲೇಜೊಂದರಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆಯನ್ನು ಸ್ವೀಕರಿಸಿದ ಬಾಂಬ್ ನಿಷ್ಕ್ರಿಯ ತಂಡಗಳು ಗುರುವಾರ ಕಾಲೇಜಿಗೆ ಧಾವಿಸಿದವು. ಆದರೆ ಅದು ತಪ್ಪು ಎಚ್ಚರಿಕೆಯಾಗಿತ್ತು ಎಂದು ನಗರದಲ್ಲಿ ಸೋಮವಾರ ನಡೆದ ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಬಳಿಕ ತಿಳಿಸಿದರು.
‘‘ಶಂಕಿತ ಪ್ಯಾಕೆಟ್ ಒಂದು ಪತ್ತೆಯಾಗಿದೆ. ಆದರೆ, ಅದು ಬಾಂಬ್ ಅಲ್ಲ ಎನ್ನುವುದು ಈಗ ಸಾಬೀತಾಗಿದೆ’’ ಎಂದು ಪೊಲೀಸ್ ಮೂಲಗಳು ತಿಳಿಸಿದವು.
7 ಮಂದಿಯ ಬಂಧನ
ಮ್ಯಾಂಚೆಸ್ಟರ್ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಬಾಂಬ್ ದಾಳಿಗೆ ಸಂಬಂಧಿಸಿ ಬ್ರಿಟಿಶ್ ಪೊಲೀಸರು ಬುಧವಾರ ಏಳನೆ ವ್ಯಕ್ತಿಯನ್ನು ಬಂಧಿಸಿದರು.
‘‘ವಾರ್ವಿಕ್‌ಶಯರ್‌ನ ನ್ಯೂನಿಯಟನ್‌ನಲ್ಲಿನ ಸ್ಥಳವೊಂದರಲ್ಲಿ ಬುಧವಾರ ಸಂಜೆ ನಾವು ಶೋಧ ಕಾರ್ಯ ಕೈಗೊಂಡೆವು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿದೆವು’’ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ ಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸ್ಫೋಟಕ್ಕೆ ಸಂಬಂಧಿಸಿ ಈವರೆಗೆ ಆರು ಪುರುಷರು ಮತ್ತು ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದಂತಾಗಿದೆ. ಅವರನ್ನು ಈಗ ಪೊಲೀಸರು ಪ್ರಶ್ನಿಸುತ್ತಿದ್ದಾರೆ.







